‘ಜ್ಞಾನ ಸೇತು ಯೋಜನೆ’ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಹಕಾರಿ : ಸಚಿವ ಬಸವರಾಜ ರಾಯರೆಡ್ಡಿ

ಬೆಂಗಳೂರು : ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿಯಲ್ಲಿರುವ 550ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಸುಮಾರು 5 ಲಕ್ಷ ವಿದ್ಯಾರ್ಥಿಗಳಿದ್ದು, ಅವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಗ್ರಾಮೀಣ ಹಿನ್ನೆಲೆಗೆ ಸೇರಿದವರಾಗಿದ್ದಾರೆ. ಅಂಥವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಜ್ಞಾನಸೇತು ಯೋಜನೆ ಸಹಕಾರಿಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಸೋಮವಾರ ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‍ನಲ್ಲಿ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯೊಂದಿಗೆ ಉನ್ನತ ಶಿಕ್ಷಣ ಇಲಾಖೆಯ ಒಡಂಬಡಿಕೆ ವಿನಿಮಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಸಗಿ ಸಂಸ್ಥೆಗಳು ಸಮಾಜಸೇವೆಯ ಭಾಗವಾಗಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ನೀಡುತ್ತಿರುವುದು ಅತ್ಯಂತ ಸಂತಸದ ವಿಷಯ. ರಾಜ್ಯದಲ್ಲಿ, ಇದರೊಂದಿಗೆ, ರೋಟರಿ ಸಂಸ್ಥೆ ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಸರಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ಕಲಿಕಾ ಸಹಾಯಕ ಚಟುವಟಿಕೆಗಳನ್ನು ರೂಪಿಸಲು 3 ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಇದರ ಭಾಗವಾಗಿ ಈ ವರ್ಷ 250 ಲ್ಯಾಪ್ ಟಾಪ್‍ಗಳಲ್ಲಿ ಲೈಸನ್ಸ್ಡ್ ಸಾಫ್ಟ್ ವೇರ್ ಅಳವಡಿಸಿ ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ದತೆ ನಡೆಸಲಾಗಿದೆ. ಸರಕಾರಿ ಕಾಲೇಜುಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯ/ಡಿಜಿಟಲ್ ಲರ್ನಿಂಗ್ ಸೆಂಟರ್ ರೂಪಿಸಲು ಯೋಜನೆ ಸಿದ್ಧಪಡಿಸಿದೆ. ಮೈಕ್ರೋಸಾಫ್ಟ್ ಕಂಪೆನಿಯಿಂದ 500, ಕಾಗ್ನಿಸೆಂಟ್ ಕಂಪೆನಿಯಿಂದ 1ಸಾವಿರ ಕಂಪ್ಯೂಟರ್ ಗಳನ್ನು ಶೀಘ್ರದಲ್ಲಿಯೇ ಸರಕಾರಿ ಕಾಲೇಜುಗಳಿಗೆ ವಿತರಿಸಲಿದ್ದೇವೆ. ಇವುಗಳ ಸಾಗಣೆ, ಸಾಫ್ಟ್ ವೇರ್ ಅಳವಡಿಕೆ, ಪರೀಕ್ಷೆ, ವಿತರಣೆಗಳಿಗೆ ತಗಲುವ ವೆಚ್ಚವನ್ನು ರೋಟರಿ ಸಂಸ್ಥೆಯೇ ಭರಿಸಲಿದೆ ಎಂದು ರಾಯರೆಡ್ಡಿ ತಿಳಿಸಿದರು.
ಇದಲ್ಲದೇ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಗೂ ರೋಟರಿ ಸಂಸ್ಥೆ ಸಹಕಾರ ನೀಡಲಿದೆ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಇ-ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರಿನ ಸಂಸ್ಕರಣೆ ಸೇರಿದಂತೆ ಹಲವಾರು ರೀತಿಯಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಲಿದೆ. ನಮ್ಮ ಸರಕಾರ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ನೀಡಲು ಹಲವಾರು ಯೋಜನೆ ರೂಪಿಸಿದೆ. ಸರಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ಎಲ್ಲ ರೀತಿಯ ಸೌಲಭ್ಯ ನೀಡುವುದು ನಮ್ಮ ಗುರಿಯಾಗಿದೆ ಎಂದು ರಾಯರೆಡ್ಡಿ ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಜಯರಾಮನ್ ಎಸ್., ಸುರೇಶ್ ಹರಿ, ಅನಿಲ್ ಗುಪ್ತ, ಕೆ.ಪಿ.ನಾಗೇಶ್ ಸೇರಿದಂತೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






