ಲಂಚಕ್ಕೆ ಬೇಡಿಕೆಯಿಟ್ಟ ಆರೋಪ | ಅಬಕಾರಿ ಉಪ ಆಯುಕ್ತ ಸಹಿತ ಮೂವರಿಗೆ ನ್ಯಾಯಾಂಗ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಹೋಟೆಲ್ ಮತ್ತು ವಸತಿ ಗೃಹಗಳಿಗೆ ಮದ್ಯ ಮಾರಾಟ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಅಬಕಾರಿ ಇಲಾಖೆಯ ಉಪ ಆಯುಕ್ತ, ಪೊಲೀಸ್ ಅಧೀಕ್ಷಕ ಸೇರಿದಂತೆ ಮೂವರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಬಕಾರಿ ಡಿಸಿ ಜಗದೀಶ್, ಎಸ್ಪಿ ತಮ್ಮಣ್ಣ ಮತ್ತು ಕಾನ್ಸ್ಟೇಬಲ್ ಲಕ್ಕಪ್ಪ ಗಣಿಗೆ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆಹಾಕಿದ ಲೋಕಾಯುಕ್ತ ಪೊಲೀಸರು, ಜ.17ರ ತಡರಾತ್ರಿಯವರೆಗೂ ಸುದೀರ್ಘ ವಿಚಾರಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಕರ್ನಾಟಕದಲ್ಲಿ ಹೋಟೆಲ್ಗಳು ಮತ್ತು ವಸತಿ ಗೃಹಗಳು ತಮ್ಮ ಗ್ರಾಹಕರಿಗೆ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆಯಿಂದ ಪಡೆಯಬೇಕಾದ ಕಡ್ಡಾಯ ಪರವಾನಗಿಯನ್ನು ಸಿಎಲ್-7 ಲೈಸೆನ್ಸ್ ಎನ್ನಲಾಗುತ್ತದೆ. ಈ ಪರವಾನಗಿ ಪಡೆಯಲು ಅಧಿಕಾರಿಗಳು ಭಾರಿ ಮೊತ್ತದ ಲಂಚದ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ.
ಲೋಕಾಯುಕ್ತರಿಂದ ಅಧಿಕೃತ ವರದಿ ಬಂದ ತಕ್ಷಣ, ಬಂಧಿತ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲು ಅಬಕಾರಿ ಆಯುಕ್ತರು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರಿಂದ ಆಂತರಿಕ ತನಿಖೆಗೆ ಸೂಚನೆ: ಈ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಬಕಾರಿ ಸಚಿವರು, ಇಡೀ ಪ್ರಕರಣದ ಕುರಿತು ಆಂತರಿಕ ತನಿಖೆ ನಡೆಸುವಂತೆ ಇಲಾಖೆಯ ಅಧಿಕಾರಿ ವೆಂಕಟೇಶ್ ಅವರಿಗೆ ಸೂಚಿಸಿದ್ದಾರೆ. ಪರವಾನಗಿ ಪ್ರಕ್ರಿಯೆಯನ್ನು ಈಗಾಗಲೇ ಆನ್ಲೈನ್ ಮಾಡಲಾಗಿದ್ದು, ಯಾರನ್ನೂ ಭೇಟಿ ಮಾಡುವ ಅಗತ್ಯವಿಲ್ಲ ಎಂಬುದು ಇಲಾಖೆಯ ವಾದ. ಆದರೂ, ಅಕ್ರಮ ನಡೆದಿರುವುದು ಹೇಗೆ ಎಂಬ ಬಗ್ಗೆ ವರದಿ ಕೇಳಲಾಗಿದೆ.







