ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಸಂಘಟಿತ ಹೋರಾಟ ಅಗತ್ಯ : ನ್ಯಾ.ನಾಗಮೋಹನ್ ದಾಸ್

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದರ ಜತೆಗೆ, ಹೆಚ್ಚುವರಿ ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಹಾಗೂ ಕಾನೂನು ಬದ್ಧ ರಕ್ಷಣೆ ಕಲ್ಪಿಸಲು ಸರಕಾರದ ಮೇಲೆ ಒತ್ತಡ ತರುವುದರ ಜೊತೆಗೆ ಸಂಘಟಿತ ಹೋರಾಟ ಅಗತ್ಯ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಕರೆ ನೀಡಿದ್ದಾರೆ.
ಗುರುವಾರ ನಗರದ ಶಾಸಕರ ಭವನದಲ್ಲಿ ಜಾಗೃತ ಕರ್ನಾಟಕ, ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ, ಹಿಂದುಳಿದ ವರ್ಗಗಳ ಒಕ್ಕೂಟ, ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ, ಪರಿಶಿಷ್ಟ ಪಂಗಡ ಸಂಘಟನೆಗಳ ಒಕ್ಕೂಟದ ವತಿಯಿಂದ ‘ಶೇ.56ರಷ್ಟು ಮೀಸಲಾತಿ ತಡೆ-ಶೋಷಿತ ಸಮುದಾಯಗಳಿಗೆ ದೊಡ್ಡ ಅನ್ಯಾಯ’ ವಿಷಯದ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೋರಾಟಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. 2020ರ ಜುಲೈನಲ್ಲಿ ತಮ್ಮ ಆಯೋಗವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಿ ಶಿಫಾರಸು ಮಾಡಿತ್ತು. ಸರಕಾರ ಶಿಫಾರಸನ್ನು ಒಪ್ಪಿ ಆದೇಶ ಹೊರಡಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಜಾರಿಗೊಳಿಸಿತ್ತು. ಆದರೆ, ಎರಡು ವರ್ಷಗಳ ಬಳಿಕ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಸಂವಿಧಾನ ಮತ್ತು ಸುಪ್ರೀಂಕೋರ್ಟ್‌ನ ಹಿಂದಿನ ತೀರ್ಪುಗಳ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳದ ಆದೇಶವನ್ನು ರದ್ದುಪಡಿಸಿತು ಎಂದು ನಾಗಮೋಹನ್ ದಾಸ್ ವಿವರಿಸಿದರು.
ಇಡಬ್ಲ್ಯೂಎಸ್ ಮಾದರಿಯಲ್ಲಿ ಅವಕಾಶ ಕಲ್ಪಿಸಿ: ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ(ಇಡಬ್ಲ್ಯೂಎಸ್) ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಸಂವಿಧಾನಕ್ಕೆ 103ನೇ ತಿದ್ದುಪಡಿ ತರಲಾಗಿದೆ. ಇದರಿಂದ ಶೇ.50ರ ಮೀಸಲಾತಿ ಮಿತಿ ದಾಟಿಯೂ ಅವಕಾಶ ಕಲ್ಪಿಸಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದೇ ಮಾದರಿಯಲ್ಲಿ ಎಸ್‌ಸಿ-ಎಸ್‌ಟಿಗಳಿಗೂ ಹೆಚ್ಚುವರಿ ಮೀಸಲಾತಿ ಕಲ್ಪಿಸುವ ಕುರಿತು ಸರಕಾರ ಕ್ರಮ ಕೈಗೊಳ್ಳಬಹುದು ಎಂದು ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಒಳಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಮುಹಮ್ಮದ್ ಯಾಸಿನ್ ಮಲ್ಪೆ, ಜಾಗೃತ ಕರ್ನಾಟಕ ಮುಖಂಡರಾದ ಮುತ್ತುರಾಜು, ಅನಿಲ್ ಕುಮಾರ್, ವಿನೋದ್ ಕುಮಾರ್, ಕೃಷ್ಣ, ಆದಂ ಖಾನ್, ಶ್ರೀಧರ್, ಎಸ್‌ಸಿ-ಎಸ್‌ಟಿ ಮುಖಂಡರು, ಹೋರಾಟಗಾರರು ಹಲವರು ಭಾಗವಹಿಸಿದ್ದರು.
ಇಡಬ್ಲ್ಯೂಎಸ್ ಮೀಸಲಾತಿಯಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ ಶೇ.59ಕ್ಕೆ ಏರಿಕೆಯಾಗಿದೆ. ಹೀಗಿರುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಹಾಗೂ ಆಡಳಿತದಲ್ಲಿ ಸಮರ್ಪಕ ಪ್ರಾತಿನಿಧ್ಯದ ಕೊರತೆಯನ್ನು ಪರಿಗಣಿಸಿ ಮೀಸಲಾತಿ ಹೆಚ್ಚಳಕ್ಕೆ ಅವಕಾಶ ಕಲ್ಪಿಸಬೇಕಿದೆ.
-ಎಚ್.ಎನ್.ನಾಗಮೋಹನ್ ದಾಸ್, ನಿವೃತ್ತ ನ್ಯಾಯಮೂರ್ತಿ






