ಗ್ರಾಮೀಣ ಡಾಕ್ ಸೇವಕರು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು : ಜ್ಯೋತಿರಾದಿತ್ಯ ಎಂ.ಸಿಂಧ್ಯಾ

ಬೆಂಗಳೂರು : ಗ್ರಾಮೀಣ ಅಂಚೆ ಸೇವೆಗಳ ಬೆನ್ನೆಲುಬಾದ ಗ್ರಾಮೀಣ ಡಾಕ್ ಸೇವಕರು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು. ಅವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ.ಸಿಂಧ್ಯಾ ತಿಳಿಸಿದರು.
ಗುರುವಾರ ನಗರದ ಟೌನ್ ಹಾಲ್‍ನಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರಿನ ಅಂಚೆ ಕಚೇರಿಯ ಜಿಡಿಎಸ್ ಸಿಬ್ಬಂದಿಗಳೊಂದಿಗೆ ಸಂವಾದ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾಕ್ ಸೇವಕರು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಯು ‘ಡಾಕ್ ಸೇವಾ, ಜನ ಸೇವಾ’ ಎಂಬ ಮನೋಭಾವವನ್ನು ಬಲಪಡಿಸುತ್ತದೆ ಎಂದರು.
ಅಂಚೆ ಸೇವಕರು ಚೀಲದಲ್ಲಿ ಅಕ್ಷರವನ್ನು ಮಾತ್ರ ಕೊಂಡೊಯ್ಯವುದಿಲ್ಲ, ಜನರ ವಿಶ್ವಾಸವನ್ನು ಹೊಂದಿರುತ್ತಾರೆ. ದೇಶದ ಪ್ರತೀ ಕುಟುಂಬವೂ ತಮ್ಮ ಸೇವೆಯನ್ನು ನೆನೆಯುತ್ತದೆ. ನಮ್ಮ ಹಳ್ಳಿಯಲ್ಲಿರುವ ಪ್ರತಿಯೊಂದು ಅಂಚೆ ಕಚೇರಿಯು ಮಾಲ್ ಇದ್ದಂತೆ. ನಾವು ನಮ್ಮ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಬೇಕು. ಹೊಸತನ್ನು ಬಯಸುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಡಾಕ್ ಸೇವಕರು ಅಂಚೆ ಇಲಾಖೆಯ ಪ್ರಮುಖ ಭಾಗವಾಗಿದ್ದು, ನಿಮ್ಮೊಂದಿಗೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ನಿಮ್ಮ ಬದ್ಧತೆಯ ಸೇವೆಯನ್ನು ನಾವು ಬಯಸುತ್ತೇವೆ ಜ್ಯೋತಿರಾದಿತ್ಯ ಸಿಂಧ್ಯಾ ನುಡಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಕಾರ್ಯದರ್ಶಿ ವಂದಿತಾ ಕೌಲ್, ಅಂಚೆ ಸೇವೆಗಳ ಮಂಡಳಿಯ ಸದಸ್ಯೆ ಮಂಜು ಕುಮಾರ್, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು, ಡಾಕ್ ಸೇವಕರು ಭಾಗವಹಿಸಿದ್ದರು.







