ಆನ್‍ಲೈನ್‍ನಲ್ಲಿ ರೇಷ್ಮೆ ಸೀರೆ ಮಾರಾಟ ಸ್ಥಗಿತ, ಸ್ಥಳೀಯವಾಗಿಯೇ ಮಾರಾಟ : ಕೆ.ವೆಂಕಟೇಶ್

ಬೆಂಗಳೂರು : ಬೇಡಿಕೆಯ ಹಿನ್ನೆಲೆಯಲ್ಲಿ ಗುಣಮಟ್ಟದ ಮೈಸೂರು ರೇಷ್ಮೆ ಸೀರೆಗಳ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುವುದರ ಜತೆಗೆ ರೇಷ್ಮೆ ಸೀರೆಗಳ ಆನ್‍ಲೈನ್‍ನಲ್ಲಿ ಮಾರಾಟವನ್ನು ನಿಲ್ಲಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಚಿಂತನೆ ಸರಕಾರಕ್ಕಿದೆ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಟಿ.ಎಸ್.ಶ್ರೀವತ್ಸ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ರೇಷ್ಮೆ ಸೀರೆಗಳಿಗೆ ಬಹಳ ಬೇಡಿಕೆ ಇದೆ. ಆದರೆ, ದಿನಕ್ಕೆ 300 ರಿಂದ 400 ಸೀರೆಗಳನ್ನು ಮಾತ್ರ ಉತ್ಪಾದನೆ ಆಗುತ್ತಿದೆ. ಇದನ್ನು ಅತ್ಯಂತ ಎಚ್ಚರಿಕೆಯಿಂದ, ಸೂಕ್ಷ್ಮವಾಗಿ ತಯಾರು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಸೀರೆಗಳ ಉತ್ಪಾದನೆ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸೀರೆಯಲ್ಲಿ ಲೋಪ ಇದ್ದಲ್ಲಿ ಮಹಿಳೆಯರು ಖರೀದಿ ಮಾಡುವುದಿಲ್ಲ. ಹಾಗಾಗಿ ಮಗ್ಗದ ಮೂಲಕ ನಿಧಾನವಾಗಿ ಗುಣಮಟ್ಟದ ಸೀರೆ ನೇಯ್ಗೆ ಮಾಡಲಾಗುತ್ತಿದೆ. ಹೊರ ರಾಜ್ಯ, ವಿದೇಶಗಳಿಂದಲೂ ಬೇಡಿಕೆ ಇದ್ದು, ಆನ್‍ಲೈನ್ ಮೂಲಕ ಸೇವೆ ನಿಲ್ಲಿಸುತ್ತೇವೆ. ಸ್ಥಳೀಯವಾಗಿರುವ ಬೇಡಿಕೆಯನ್ನು ಮೊದಲು ನಿವಾರಿಸುತ್ತೇವೆ ಎಂದು ಉಲ್ಲೇಖಿಸಿದರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ ಮೂರು ವರ್ಷಗಳಿಂದ ಒಟ್ಟು 3,10,667 ಸೀರೆಗಳು ತಯಾರಾಗಿದೆ. ಈ ಪೈಕಿ ಮಾರಾಟವಾಗಿರುವ ಸೀರೆಗಳು 3,09,659. ನಿಗಮ 2022-23ರಲ್ಲಿ 46.75 ಕೋಟಿ, 2023-24 ಸಾಲಿನಲ್ಲಿ 73.40 ಕೋಟಿ ರೂ. ಹಾಗೂ 2024-25ರಲ್ಲಿ 101.15 ಕೋಟಿ ರೂ. ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಟಿ.ನರಸೀಪುರ ರೇಷ್ಮೆ ನೂಲು ತಯಾರಿಕಾ ಘಟಕ ಮುಚ್ಚುವ ವಿಚಾರವನ್ನು ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಟಿ.ನರಸೀಪುರ ರೇಷ್ಮೆ ನೂಲು ತಯಾರಿಕಾ ಘಟಕ ಮುಚ್ಚಲು ಹೊರಟ ಸರಕಾರದ ನಡೆ ಸರಿಯಲ್ಲ ಎಂದು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆ ಜಾಗ ಈಗ ಮಾರಾಟಕ್ಕಿಲ್ಲ. ಟಿ.ನರಸೀಪುರದ ಕೆಎಸ್‍ಐಸಿ ಘಟಕ ಮುಂದುವರೆಯಲಿದೆ, ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ರೀಡಾಂಗಣ ನಿರ್ಮಿಸುವುದಿಲ್ಲ: ‘ಕರ್ನಾಟಕ ರೇಷ್ಮೆ ಉದ್ಯಮ ನಿಗಮಕ್ಕೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಪ್ರಸ್ತಾವನನ್ನು ಕೈಬಿಡಲಾಗಿದೆ’ ಎಂದು ಸಚಿವ ವೆಂಕಟೇಶ್ ಉತ್ತರಿಸಿದರು.







