ಪೊಲೀಸರಿಂದ ಕೈ ಕಾರ್ಯಕರ್ತರಿಗೆ ಕಿರುಕುಳ ಆರೋಪ; ಎಸ್ಪಿಗೆ ದೂರು ನೀಡಿದ ಕಡೂರು ಶಾಸಕ ಆನಂದ್

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ, ಕಡೂರು ಠಾಣೆಯ ಪೊಲೀಸರು ಕರ್ತವ್ಯ ಲೋಪ ಎಸಗುತ್ತಿದ್ದು, ಕಾರ್ಯಕರ್ತರ ದೂರುಗಳಿಗೆ ಸ್ಪಂದಿಸದೆ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಡೂರು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಬುಧವಾರ ತಮ್ಮ ಬೆಂಬಲಿಗರೊಂದಿಗೆ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆನಂದ್, ಕಡೂರು ವಿಧಾನಸಭಾ ಕ್ಷೇತ್ರದ ಅಜ್ಜಂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮತ್ತು ಗೊಂದಲಗಳು ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್ಪಿಯವರಿಗೆ ದೂರು ನೀಡಲಾಗಿದೆ.
ಅಜ್ಜಂಪುರ ಠಾಣೆಯ ಕೆಲ ಪೊಲೀಸರು ವಿನಾಕಾರಣ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ನಡೆದ ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳ ವಾಹನಗಳನ್ನು ಬೇಗ ಬಿಟ್ಟು ರೈತರನ್ನು ದಿನಗಟ್ಟಲೆ ಕಾಯಿಸುವ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡಲಾಗಿದೆ ಎಂದು ದೂರಿದ ಅವರು, ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ನಿಷ್ಪಕ್ಷ ತನಿಖೆ ನಡೆಸುವಂತೆ ಮನವಿ ಮಾಡಲಾಗಿದ್ದು, ಎಸ್ಪಿಯವರು ಎಎಸ್ಪಿ ಅವರಿಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ಶಾಸಕ ಆನಂದ್ ಮಾಹಿತಿ ನೀಡಿದರು.






