ಕನಕಪುರ: ಬಾಲಕರ ಹಾಸ್ಟೆಲ್ ಗೆ ಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ
ವಿದ್ಯಾರ್ಥಿಗಳೊಂದಿಗೆ ಊಟ, ಹಾಸ್ಟೆಲ್ ಪರಿಶೀಲನೆ: ಸಮಸ್ಯೆ ಪರಿಹಾರದ ಭರವಸೆ

ಕನಕಪುರ, ಸೆ. 14: ಸಿಎಂ ಡಿ ಕೆ ಶಿವಕುಮಾರ್ ಅವರು ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಊಟ ಸವಿದರು.
"ವಿದ್ಯಾರ್ಥಿಗಳು ವ್ಯಕ್ತಪಡಿಸಿರುವ ಕುಂದು ಕೊರತೆಗಳನ್ನು ಉಪ ಆಯುಕ್ತರು, ಸಿಇಒಗಳಿಗೆ ಕಳಿಸಿ ಮರು ಪರಿಶೀಲನೆ ಮಾಡಿಸಿ ಸರಿಪಡಿಸಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಅವರು "ಇಂದು ಕನಕಪುರದ ಹಾಸ್ಟೆಲ್ ಗೆ ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಊಟ ಮಾಡಿ, ಚರ್ಚೆ ಮಾಡಿದ್ದೇನೆ. ಕಲಬುರ್ಗಿ, ರಾಯಚೂರು, ಬೀದರ್, ಹಾವೇರಿ, ಬೆಂಗಳೂರು, ಬಳ್ಳಾರಿಯ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆದಿದ್ದಾರೆ. ಇಲ್ಲಿ ಕೆಂಪು ಬಸ್ ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುವೆ" ಎಂದು ತಿಳಿಸಿದರು.
ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿ ಇಲ್ಲಿನ ಕೊಠಡಿ, ಶೌಚಾಲಯಗಳನ್ನು ಪರಿಶೀಲಿಸಿದ್ದೇನೆ. ಇವರಿಗೆ ಬೆಡ್ ಶೀಟ್ ಇಲ್ಲ ಎಂಬುದನ್ನು ಗಮನಿಸಿರುವೆ. ಅವರ ಸಮಸ್ಯೆಗಳೇನು ಎಂದು ಅವರಿಂದಲೇ ಬರೆಸಿದ್ದೇನೆ" ಎಂದ ಸಿಎಂ ಎಲ್ಲರಿಗೂ "ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು" ಕೋರಿದರು.
"ನಾನು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನಕಪುರಕ್ಕೆ ಆಗಮಿಸಿದ್ದೆ. ಹಾಸ್ಟೆಲ್ ಗೆ ಭೇಟಿ ನೀಡುವ ಉದ್ದೇಶದೊಂದಿಗೆ ಒಂದು ದಿನ ಮುಂಚಿತವಾಗಿ ಬಂದಿರುವೆ. ಹಬ್ಬದ ಕಾರಣ ಮಕ್ಕಳು ಊರುಗಳಿಗೆ ಹೋಗಿದ್ದು ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯ ಖಾಲಿ ಇದೆ. ಹೀಗಾಗಿ ಅಲ್ಲಿಗೆ ಹೋಗಿಲ್ಲ. ಹಾಸ್ಟೆಲ್ ನಲ್ಲಿ 75% ವ್ಯವಸ್ಥೆ ಉತ್ತಮವಾಗಿದ್ದು, ಉಳಿದದ್ದನ್ನು ಸರಿ ಮಾಡಲಾಗುವುದು" ಎಂದು ತಿಳಿಸಿದರು.






