ಮನುಕುಲಕ್ಕೆ ಹೊಸ ದಾರಿ ತೋರಿದ ಕನಕದಾಸರು : ಸಚಿವ ಶಿವರಾಜ್ ತಂಗಡಗಿ
ʼಕನಕಶ್ರೀ ಪ್ರಶಸ್ತಿʼ ಪ್ರದಾನ ಕಾರ್ಯಕ್ರಮ

ಬೆಂಗಳೂರು : ಕನಕದಾಸರು ಭಕ್ತಿಯ ಮೂಲಕ ಸಮಾಜವನ್ನು ಪ್ರಶ್ನಿಸಿ, ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಾನತೆಯ ಮೂಲಕ ಮನುಕುಲಕ್ಕೆ ಹೊಸ ದಾರಿ ತೋರಿದವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಬಣ್ಣಿಸಿದ್ದಾರೆ.
ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕನಕದಾಸರ ಜೀವನ, ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ವ್ಯಾಸರಾಯರ ಮಾರ್ಗ ದರ್ಶನದಲ್ಲಿ ಹರಿದಾಸ ಪರಂಪರೆಯಲ್ಲಿ ಗುರುತಿಸಿಕೊಂಡವರು. ತಮ್ಮ ಬದುಕನ್ನು ಭಕ್ತಿ, ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಗಾಗಿ ಮುಡಿಪಾಗಿಟ್ಟರು ಎಂದು ಸ್ಮರಿಸಿದರು.
ಕನಕದಾಸರು ಬದುಕಿದ್ದ ಕಾಲದಲ್ಲಿ ಜಾತಿ ವ್ಯವಸ್ಥೆ ಸಮಾಜದಲ್ಲಿ ಆಳವಾಗಿ ಬೇರೂರಿತ್ತು. ವ್ಯಕ್ತಿಯ ಸ್ಥಾನಮಾನವನ್ನು ಜನ್ಮದ ಆಧಾರದ ಮೇಲೆ ನಿರ್ಧರಿಸುವ ವ್ಯವಸ್ಥೆಯನ್ನು ಅವರು ಒಪ್ಪಲಿಲ್ಲ. ವ್ಯಕ್ತಿಯ ಶ್ರೇಷ್ಠತೆ ಆತನ ಜ್ಞಾನ, ಗುಣ, ನಡತೆ ಮತ್ತು ಮಾನವೀಯತೆಯಿಂದ ನಿರ್ಧಾರವಾಗಬೇಕು ಎಂಬುದನ್ನು ತಮ್ಮ ಕೀರ್ತನೆಗಳ ಮೂಲಕ ಸಾರಿದರು ಎಂದು ತಿಳಿಸಿದರು.
ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎಂಬ ಅವರ ಪ್ರಶ್ನೆ ಇಂದಿಗೂ ಸಮಾಜದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುತ್ತದೆ. ಮನುಷ್ಯನ ನಿಜವಾದ ಗುರುತು ಆತನ ಜನ್ಮವಲ್ಲ, ಬದಲಾಗಿ ಆತನ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳು ಎಂಬ ಸಂದೇಶವನ್ನು ಕನಕದಾಸರು ಸಾರಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಂಶೋಧಕ, ವಿಮರ್ಶಕ ಡಾ.ಎಚ್.ದಂಡಪ್ಪ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ರಾಷ್ಟ್ರೀಯ ಸಂತ ಕವಿ ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ನಿರ್ದೇಶಕಿ ವಸುಂಧರಾ ಮತ್ತಿತರರು ಉಪಸ್ಥಿತರಿದ್ದರು.






