ಸ್ವಾತಂತ್ರ್ಯ ದಿನದಂತೆ ಕನ್ನಡ ರಾಜ್ಯೋತ್ಸವವನ್ನೂ ಗೌರವದಿಂದ ಆಚರಿಸಬೇಕು: ಸಂಸದ ಗೋವಿಂದ ಕಾರಜೋಳ

ಗೋವಿಂದ ಕಾರಜೋಳ
ಬೆಂಗಳೂರು : ನಾವು ಸ್ವಾತಂತ್ರ್ಯ ದಿನವನ್ನು ಎಷ್ಟು ಅರ್ಥಪೂರ್ಣವಾಗಿ ಗೌರವದಿಂದ ಆಚರಿಸುತ್ತೇವೋ, ಅದೇ ರೀತಿ ಕನ್ನಡ ರಾಜ್ಯೋತ್ಸವವn ಆಚರಿಸಬೇಕು. ಪ್ರತಿಯೊಬ್ಬ ಶಾಸಕರು, ಮಂತ್ರಿಗಳು ಕಟ್ಟುನಿಟ್ಟಾಗಿ ರಾಜ್ಯೋತ್ಸವದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಅವರು ದಿಲ್ಲಿಯಲ್ಲಿ ಹೋರಾಟಕ್ಕೆ ಹೋಗಿರುವುದು ಸಂವಿಧಾನ ವಿರೋಧಿ ನೀತಿ ಎಂದು ಸಂಸದ ಗೋವಿಂದ ಕಾರಜೋಳ ಖಂಡಿಸಿದ್ದಾರೆ.
ರವಿವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟಿಸಲಿಕ್ಕೆ ಹುನ್ನಾರ ಮಾಡಿದ್ದಾರೆ. ಎಲ್ಲ ಕನ್ನಡ ತಾಯಿ ಮಕ್ಕಳಿಗೆ ರಾಜ್ಯೋತ್ಸವದ ಶುಭಾಶಯ ಕೋರಿದರು. ಕರ್ನಾಟಕದ ಏಕೀಕರಣಕ್ಕಾಗಿ ದುಡಿದಂತಹ ಸಾವಿರ-ಸಾವಿರ ಮಹನೀಯರನ್ನು ಈ ಸಂದರ್ಭದಲ್ಲಿ ನೆನೆಪಿಸಿಕೊಳ್ಳಬೇಕು ಎಂದರು.
ವಿಶೇಷವಾಗಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ ಚಿತ್ರದುರ್ಗ ಜಿಲ್ಲೆಯ ಸಿದ್ದವ್ವನಹಳ್ಳಿಯ ಎಸ್.ನಿಜಲಿಂಗಪ್ಪನವರ ಹೋರಾಟವನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು. ಕನ್ನಡ ನಾಡು, ಕನ್ನಡ ಭಾಷೆ, ನೆಲ ಹರಿದು ಹಂಚಿ ಹೋಗಿತ್ತು. ಅದನ್ನು ಒಗ್ಗೂಡಿಸಿದ ಶ್ರೇಯಸ್ಸು, ಕೀರ್ತಿ ನಿಜಲಿಂಗಪ್ಪನವರಿಗೆ ಸಲ್ಲುತ್ತದೆ ಎಂದು ಅವರು ನುಡಿದರು.
ದೇವರಾಜ ಅರಸುರನ್ನು ನೆನೆಸುತ್ತೇನೆ. ಅರಸು ಅವರು ರಾಜ್ಯದ ಸಿಎಂ ಆಗಿ ‘ಕರ್ನಾಟಕ ರಾಜ್ಯ' ಎಂಬ ಹೆಸರು ಇಡುವುದರ ಮೂಲಕ ಕನ್ನಡಿಗರ ಆಶಯವನ್ನು ಈಡೇರಿಸಿದವರು. ಕನ್ನಡ ಭಾಷೆಗೆ ಸಾವಿರ ವರ್ಷದ ಹೋರಾಟಗಳಿದೆ, 3ಸಾವಿರ ವರ್ಷದ ಇತಿಹಾಸ ಇದೆ. ಈ ನೆಲದಲ್ಲಿ ಕನ್ನಡ ಭಾಷೆ, ಕರ್ನಾಟಕದಲ್ಲಿ ಕನ್ನಡ ಯಾವತ್ತೂ ನಶಿಸಿ ಹೋಗಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ಅವರು ಮನವಿ ಮಾಡಿದರು.






