ಖಾಸಗಿ ಉದ್ಯೋಗದಲ್ಲಿ ಕನ್ನಡಿಗರ ಮೀಸಲಾತಿಗಾಗಿ ಕಾನೂನು ಜಾರಿಯಾಗಲಿ : ಸಿಎಂಗೆ ಕರವೇ ನಾರಾಯಣಗೌಡ ಒತ್ತಾಯ

ಬೆಂಗಳೂರು : ರಾಜ್ಯದ ಯುವಜನರಿಗೆ ಉದ್ಯೋಗಾವಕಾಶಗಳಲ್ಲಿ ಪ್ರಾಮುಖ್ಯತೆ ನೀಡುವುದು ಅಗತ್ಯವಾಗಿದ್ದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ಮೀಸಲಾತಿ ನೀಡುವ ಕಾನೂನನ್ನು ಶೀಘ್ರದಲ್ಲೇ ಜಾರಿಗೊಳಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿರುವ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕರ್ನಾಟಕದ ಹಿತಾಸಕ್ತಿ ಹಾಗೂ ಕನ್ನಡಿಗರ ಹಕ್ಕುಗಳ ಕುರಿತಾದ ಸಮಗ್ರ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದ ಗೌರವ-ಕನ್ನಡಿಗರ ಭವಿಷ್ಯ ಹಾಗೂ ಕನ್ನಡ ಭಾಷೆಯ ಸ್ಥಾನಮಾನ ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಕನ್ನಡ ಪರ ಹೋರಾಟ ಕೇವಲ ಭಾಷೆಯ ವಿಷಯವಲ್ಲ. ಅದು ನಾಡಿನ ಆತ್ಮದ ಪ್ರತಿಬಿಂಬ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಯುವಜನರು ತಮ್ಮದೇ ನಾಡಿನಲ್ಲಿ ಉದ್ಯೋಗಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಉಂಟಾಗಬಾರದು. ರಾಜ್ಯದ ಸಂಪನ್ಮೂಲಗಳು, ಸಂಸ್ಥೆಗಳು ಮತ್ತು ಉದ್ಯೋಗಗಳು ಕನ್ನಡಿಗರ ಹಕ್ಕುಗಳಾಗಬೇಕು. ಈ ಕಾನೂನು ಜಾರಿಯಾಗುವುದು ಕನ್ನಡದ ಮಕ್ಕಳ ಭವಿಷ್ಯಕ್ಕೆ ಭದ್ರತೆಯ ಖಚಿತತೆ ನೀಡುತ್ತದೆ ಎಂದು ಹೇಳಿದರು.
ಕನ್ನಡಕ್ಕಾಗಿ ಹೋರಾಡಿದವರು ಅಪರಾಧಿಗಳಲ್ಲ. ಅವರು ನಾಡಿನ ಗೌರವವನ್ನು ಉಳಿಸಿದ ನಿಜವಾದ ಹೋರಾಟಗಾರರು. ಅವರ ಮೇಲಿನ ಪ್ರಕರಣಗಳನ್ನು ತಕ್ಷಣ ಹಿಂಪಡೆಯುವುದು ಸರಕಾರದ ನೈತಿಕ ಕರ್ತವ್ಯ. ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣದ ವೇಳೆ ಮತ್ತು ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಚಳವಳಿಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದು, ಆ ಭರವಸೆಯನ್ನು ಕಾರ್ಯರೂಪಕ್ಕೆ ತಂದು, ಕನ್ನಡದ ಹೋರಾಟಗಾರರಿಗೆ ನ್ಯಾಯ ಒದಗಿಸಬೇಕು. ಕನ್ನಡದ ಸಿದ್ದರಾಮಯ್ಯ ಎಂಬ ಹೆಸರನ್ನು ಮತ್ತೊಮ್ಮೆ ಜನಮನಗಳಲ್ಲಿ ಪ್ರತಿಧ್ವನಿಸಲಿ ಎಂದು ಮನವಿ ಮಾಡಿದರು.
ಟಿ.ಎ.ನಾರಾಯಣಗೌಡರ ಮನವಿಯನ್ನು ಸಿಎಂ ಸಿದ್ದರಾಮಯ್ಯ, ‘ನಾವು ಕನ್ನಡಿಗರ ಹಿತಕ್ಕಾಗಿ ಬದ್ಧರಾಗಿದ್ದೇವೆ. ಉದ್ಯೋಗ ಮೀಸಲಾತಿ ಕಾನೂನನ್ನು ಪುನರ್ ಪರಿಶೀಲಿಸಿ ಸಚಿವ ಸಂಪುಟದಲ್ಲಿ ಮಂಡಿಸುತ್ತೇವೆ. ಕನ್ನಡಪರ ಚಳವಳಿಗಾರರ ವಿಷಯದಲ್ಲಿಯೂ ಸಹಾನುಭೂತಿಯಿಂದ ಕ್ರಮ ಕೈಗೊಳ್ಳುತ್ತೇವೆ. ಕನ್ನಡದ ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ಸರಕಾರ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತದೆ’ ಎಂದು ಭರವಸೆ ನೀಡಿದರು.







