ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್ ಸಾಮರ್ಥ್ಯಕ್ಕಾಗಿ ಕರ್ನಾಟಕಕ್ಕೆ ಪ್ರಶಸ್ತಿ

ಬೆಂಗಳೂರು : ಅನುಷ್ಠಾನನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್ ಸಾಮರ್ಥ್ಯಕ್ಕಾಗಿ ಕರ್ನಾಟಕವು 2026ನೇ ಸಾಲಿನ ಪ್ರಶಸ್ತಿಯನ್ನು ತನ್ನದಾಗಿಸಿಕೊಡಿದೆ. ರಾಜ್ಯದಲ್ಲಿ 9 ಗಿಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಪವನ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡುತ್ತಿರುವ ಕರ್ನಾಟಕಕ್ಕೆ ಈ ಪ್ರಶಸ್ತಿ ಲಭಿಸಿದೆ.
ಇಂಡಿಯನ್ ವಿಂಡ್ ಟರ್ಬೈನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಚೆನ್ನೈನ ಟ್ರೇಡ್ ಸೆಂಟರ್ ನಲ್ಲಿ ಆಯೋಜಿಸಿರುವ ವಿಂಡರ್ಜಿ ಇಂಡಿಯಾ 2026ರ 8ನೇ ಆವೃತ್ತಿಯಲ್ಲಿ ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ. ಪ್ರಶಸ್ತಿ ಸ್ವೀಕರಿಸಿದರು.
ಕರ್ನಾಟಕದ ಈ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಅನುಷ್ಠಾನ ಹಂತದಲ್ಲಿರುವ ಗರಿಷ್ಠ ಪವನ ವಿದ್ಯುತ್ ಸಾಮರ್ಥ್ಯ ಹೊಂದಿರುವ ರಾಜ್ಯವೆಂಬ ಮಾನ್ಯತೆ ಪಡೆದುಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಸಾಧನೆಯು ನವೀಕರಿಸಬಹುದಾದ ಇಂಧನದ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಇರುವ ನಮ್ಮ ಸರಕಾರದ ಬದ್ಧತೆ ಹಾಗೂ ಈ ವಲಯದಲ್ಲಿನ ಹೂಡಿಕೆಗೆ ಪೂರಕ ಪರಿಸರ ವ್ಯವಸ್ಥೆಯನ್ನು ಕಲ್ಪಿಸಲು ನಾವು ಕೈಗೊಂಡಿರುವ ಪ್ರಯತ್ನಗಳ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಸಾಧ್ಯವಾಗಿಸಿರುವ ಕ್ರೆಡಲ್ ಹಾಗೂ ಎಲ್ಲ ಪಾಲುದಾರರನ್ನು ನಾನು ಅಭಿನಂದಿಸುತ್ತೇನೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ನಮ್ಮ ಇಂಥ ಪ್ರಯತ್ನಗಳು ನಿರಂತರವಾಗಿರುತ್ತವೆ ಎಂದು ಜಾರ್ಜ್ ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯವು ನಿರಂತರವಾಗಿ ಕೈಗೊಂಡಿರುವ ಪ್ರಯತ್ನಗಳ ಫಲವಾಗಿ ಈ ಪ್ರಶಸ್ತಿ ದೊರೆತಿದೆ. ನವೀಕರಿಸಬಹುದಾದ ಇಂಧನ ವಲಯದ ನೀತಿಗಳು, ಮೂಲಸೌಕರ್ಯ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೆ ಸಾಕ್ಷಿಯಾಗಿ ಈ ಮಾನ್ಯತೆ ದೊರೆತಿದೆ. ನಿಗದಿತ ಸಮಯದೊಳಗೆ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುವ ಜತೆಗೆ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ಬಲಪಡಿಸಲು ಇಂಧನ ಇಲಾಖೆ ಬದ್ಧ.
-ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ
ಅನುಷ್ಠಾನ ಹಂತದಲ್ಲಿರುವ 9 ಗಿಗಾವ್ಯಾಟ್ ಪವನ ವಿದ್ಯುತ್ ಸಾಮರ್ಥ್ಯಕ್ಕಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಸಂತಸದ ತಂದಿದೆ. ಇಂಧನ ಸಚಿವರ ಮಾರ್ಗದರ್ಶನ ಹಾಗೂ ಬೆಂಬಲದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಕರ್ನಾಟಕವು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಪವನ ವಿದ್ಯುತ್ ವಲಯದಲ್ಲಿನ ಹೂಡಿಕೆಗೆ ಆದ್ಯತೆಯ ತಾಣವಾಗಿ ರಾಜ್ಯದ ಸ್ಥಾನವನ್ನು ಬಲಪಡಿಸುವಲ್ಲಿ ಈ ಪ್ರಶಸ್ತಿಯು ದೊಡ್ಡ ಪಾತ್ರವಹಿಸಲಿದೆ. ಹೂಡಿಕೆದಾರರು ಹಾಗೂ ಯೋಜನೆಗಳಿಗೆ ಅಗತ್ಯ ಸಹಕಾರ ನೀಡುವ ಜತೆಗೆ ನವೀಕರಿಸಬಹುದಾದ ಇಂಧನ ವಲಯದ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ರೆಡಲ್ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ.
-ದಿವ್ಯಾ ಪ್ರಭು ಜಿ.ಆರ್.ಜೆ, ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್






