ವಿದ್ಯುತ್ ಚಾಲಿತ, ಡೀಸೆಲ್ ಸೇರಿ 5 ಸಾವಿರ ಹೊಸ ಬಸ್

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರ : 2026-27ನೆ ಸಾಲಿನಲ್ಲಿ ವಿದ್ಯುತ್ ಚಾಲಿತ, ಡೀಸೆಲ್ ಬಸ್ಸುಗಳು ಸೇರಿದಂತೆ ಒಟ್ಟಾರೆ 5 ಸಾವಿರ ಹೊಸ ಬಸ್ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ವಿಶ್ವಬ್ಯಾಂಕ್ ನೆರವಿನೊಂದಿಗೆ 2,000 ಕೋಟಿ ರೂ.ಗಳ ಮೊತ್ತದ ಕೆಇಬಿಪಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದರಡಿ ಬಿಎಂಟಿಸಿ ಸಂಸ್ಥೆಯ 32 ಹಾಗೂ ಇತರೆ ರಸ್ತೆ ಸಾರಿಗೆ ನಿಗಮಗಳ 62 ಎಲೆಕ್ಟ್ರಿಕ್ ಬಸ್ ಡಿಪೋಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ 4,000 ವಿದ್ಯುತ್ ಚಾಲಿತ ಬಸ್ಸುಗಳನ್ನು ಒದಗಿಸಲಾಗುವುದು. ಅದೇ ರೀತಿ, ಕಳೆದ ವರ್ಷ ಘೋಷಿಸಿರುವಂತೆ 2,000 ಡೀಸೆಲ್ ಬಸ್ಸುಗಳನ್ನು ನೇರ ಖರೀದಿ ಮೂಲಕ ಒದಗಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಇದೂ ಸೇರಿದಂತೆ 2026-27ನೆ ಸಾಲಿನಲ್ಲಿ 1,000 ಡೀಸೆಲ್ ಬಸ್ಸುಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದರು.
ಮಹಿಳಾ ಸಬಲೀಕರಣದ ಸದುದ್ದೇಶದಿಂದ ಜಾರಿಗೊಳಿಸಿರುವ ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಪ್ರಯೋಜನ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇದುವರೆಗೆ 684 ಕೋಟಿ ಟ್ರಿಪ್ಗಳಲ್ಲಿ ಮಹಿಳಾ ಫಲಾನುಭವಿಗಳು ಪ್ರಯಾಣ ಸೌಲಭ್ಯ ಪಡೆದಿದ್ದು, ಈ ಯೋಜನೆಯ ಅನುಷ್ಠಾನಕ್ಕಾಗಿ 2026-27ನೆ ಸಾಲಿಗೆ 5,300 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಅಪಘಾತ ಸ್ಥಳಗಳನ್ನು ಗುರುತಿಸಲು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಐಐಟಿ. ಮದ್ರಾಸ್ ಮತ್ತು ಎನ್ಐಸಿ ಸಹಯೋಗದೊಂದಿಗೆ ಡ್ಯಾಶ್ ಬೋರ್ಡ್ ಒಳಗೊಂಡ ಆಧುನಿಕ ತಂತ್ರಾಂಶವನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ 25 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಡ್ರೈವಿಂಗ್ ಟ್ರ್ಯಾಕ್ಗಳು ಹಾಗೂ ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್ ಕಟ್ಟಡಗಳ ಮೇಲ್ಛಾವಣಿಯಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ರೂಫ್ ಟಾಪ್ ಸೋಲಾರ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ತುಮಕೂರಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಸೀಜಿಂಗ್ ಯಾರ್ಡ್ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ರಾಮದುರ್ಗ, ಹೊನ್ನಾಳಿ ಮತ್ತು ಗದಗದಲ್ಲಿ ನೂತನ ಬಸ್ಸು ನಿಲ್ದಾಣಗಳನ್ನು ಹಾಗೂ ತರೀಕೆರೆಯಲ್ಲಿ ಬಸ್ಸು ಡಿಪೋ ಅನ್ನು ನಿರ್ಮಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.
ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆಗೆ ನಿಶ್ಚಯ: ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಗಳ ವೇತನ ಪರಿಷ್ಕರಣೆ ಬಾಕಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗಿದ್ದು, ವೇತನವನ್ನು ಪರಿಷ್ಕರಿಸಲು ನಮ್ಮ ಸರಕಾರ ನಿಶ್ಚಯಿಸಿದೆ. ಸದ್ಯ ವೇತನ ಬಾಕಿ ಪಾವತಿಗಾಗಿ 1,271 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.







