ಇದು ಬಜೆಟ್ ಅಲ್ಲ, ರಾಜ್ಯದ ಜನರಿಗೆ ಕೊಟ್ಟ ಉಡುಗೊರೆ: ಡಿ.ಕೆ.ಶಿವಕುಮಾರ್

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದು ಕೇವಲ ಆಯವ್ಯಯವಲ್ಲ, ಬದಲಿಗೆ, ರಾಜ್ಯದ ಎಲ್ಲ ವರ್ಗದ ಜನರು ಸಂತೋಷ ಪಡುವಂತಹ ಉಡುಗೊರೆಯ ಬಜೆಟ್ ನೀಡಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ನಗರದ ಹೆಚ್ಚು ಯೋಜನೆಗಳಿಗೆ ಸಹಾಯ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಸುಮಾರು 1ಲಕ್ಷ ಕೋಟಿ ರೂ.ಗಳಷ್ಟು ಹಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 4ಲಕ್ಷ ಕೋಟಿ ರೂ.ಗಳಿಗೂ ಮೀರಿದ ಬಜೆಟ್‍ನಲ್ಲಿ ನೀರಾವರಿ, ಲೋಕೋಪಯೋಗಿ ಇಲಾಖೆಗೆ ಆದ್ಯತೆ ನೀಡಲಾಗಿದ್ದು, ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ 8ಸಾವಿರ ಕೋಟಿ ರೂ.ನೀಡಲಾಗಿದೆ ಎಂದರು.
ರಾಜ್ಯ ಸರಕಾರ ಸಾಲ ಮಾಡಿದೆ ಎನ್ನುವುದಾದರೆ ಕೇಂದ್ರ ಸರಕಾರವೂ ಸಾಲ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳುವ ಬಜೆಟ್ ಮಂಡಿಸಲಾಗಿದೆ ಎಂದ ಅವರು, ನಾನು 1989ರಿಂದ ಶಾಸಕನಾಗಿ ಆಯ್ಕೆಯಾಗಿದ್ದು, ನನ್ನ 36 ವರ್ಷಗಳ ರಾಜಕೀಯ ಪಯಣದಲ್ಲಿ ಇದು ಐತಿಹಾಸಿಕ, ಜನಪರವಾದ, ಎಲ್ಲ ವರ್ಗದ ಜನರಿಗೂ ನ್ಯಾಯ ಕೊಡಿಸುವ ದೂರದೃಷ್ಟಿಯ ಬಜೆಟ್ ಎಂದು ವಿಶ್ಲೇಷಿಸಿದರು.
‘ಮುಸ್ಲಿಮ್ ಓಲೈಕೆ ಮಾಡುವ ಬಜೆಟ್ ಎಂಬ ಬಿಜೆಪಿ ನಾಯಕರ ಆರೋಪ ಮಾಡಿದ್ದಾರೆ. ಆದರೆ, ನಾವು ಎಲ್ಲ ವರ್ಗದವರನ್ನು ಓಲೈಕೆ ಮಾಡಬೇಕಲ್ಲವೇ?. ಎಲ್ಲರನ್ನು ಸಮಾನವಾಗಿ ನೋಡಬೇಕು ಎಂದ ಅವರು, ‘ಬ್ರ್ಯಾಂಡ್ ಬೆಂಗಳೂರು ಕೇವಲ ನನ್ನ ಕನಸಲ್ಲ. ರಾಜ್ಯ ಹಾಗೂ ದೇಶದ ಕನಸು. ಕೇಂದ್ರ ಸರಕಾರವಂತೂ ಬೆಂಗಳೂರಿಗೆ ಏನು ನೀಡಲಿಲ್ಲ. ನಮ್ಮ ಸರಕಾರವಾದರೂ ನೀಡಬೇಕಲ್ಲವೇ? ಎಂದು ಪ್ರಶ್ನಿಸಿದರು.







