ಕನ್ನಡ ಮತ್ತು ಸಂಸ್ಕೃತಿ ಲಾಖೆ: ‘ಅರ್ಧಶತಮಾನದ ದಲಿತ ಸಾಹಿತ್ಯ’ ಕೃತಿ ಪ್ರಕಟಿಸಲು ಒಂದು ಕೋಟಿ ರೂ. ನೆರವು

ಬೆಂಗಳೂರು : ದಲಿತ ಸಾಹಿತ್ಯ ಚಳುವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ದಲಿತ ಕವಿ ಸಿದ್ದಲಿಂಗಯ್ಯರವರ ಸಾಹಿತ್ಯವೂ ಸೇರಿದಂತೆ 50 ವರ್ಷಗಳಲ್ಲಿ ರಚನೆಯಾದ ದಲಿತ ಸಾಹಿತ್ಯವನ್ನು ಸಂಪಾದಿಸಿ ‘ಅರ್ಧಶತಮಾನದ ದಲಿತ ಸಾಹಿತ್ಯ’ ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಲು ಒಂದು ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಮಕ್ಕಳಿಗಾಗಿ ಪಂಪ, ರನ್ನ, ಜನ್ನ, ಬಸವಾದಿ ಶರಣರು, ಸರ್ವಜ್ಞ, ಕನಕ, ಪುರಂದರ, ಲಕ್ಷ್ಮೀಶ, ಸಂಚಿ ಹೊನ್ನಮ್ಮ ಹಾಗೂ ಕುವೆಂಪು, ಶಿವರಾಮ ಕಾರಂತ, ದೇವನೂರು ಮಹದೇವ ಮುಂತಾದವರ ಕೃತಿಗಳ ಬಣ್ಣದ ಚಿತ್ರಗಳು, ಸಣ್ಣ ವಾಕ್ಯಗಳ ಪುಸ್ತಕಗಳನ್ನು ಸಾಹಿತ್ಯ ಅಕಾಡೆಮಿಯಿಂದ ಮುದ್ರಿಸಿ ಪ್ರಕಟಿಸಲಾಗುವುದು ಎಂದರು.
ಮುಖ್ಯಾಂಶಗಳು:
•ಪ್ರತಿ ವರ್ಷ ರಂಗಭೂಮಿ, ಲಲಿತಕಲೆ, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಐದು ಕೋಟಿ ರೂ.ಗಳನ್ನು ನೀಡುವುದು.
•ಜಾನಪದ, ಬುಡಕಟ್ಟು ಕಲಾವಿದರು, ವಿದ್ವಾಂಸರು ಹಾಗೂ ಜಾನಪದ ವಾದ್ಯಗಾರರನ್ನು ಒಳಗೊಂಡ ಸಮಾವೇಶಗಳನ್ನು ‘ಜಾನಪದ ಸಂಗಮ’ ಶೀರ್ಷಿಕೆಯಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುವುದು.
•.ಜಿ.ಎಸ್.ಶಿವರುದ್ರಪ್ಪರ ಗೀತೆಗಳ ಗಾಯನ, ವಿಚಾರ ಸಂಕಿರಣ, ಕವಿಗೋಷ್ಠಿ, ಆಯ್ದ ಕೃತಿಗಳ ಇಂಗ್ಲಿಷ್ ಅನುವಾದ, ಸಾಹಿತ್ಯ ವಾಚಿಕೆ ಹಾಗೂ ಜಿಎಸ್‍ಎಸ್ ಪ್ರಶಸ್ತಿ ನೀಡಲು ಎರಡು ಕೋಟಿ ರೂ. ಒದಗಿಸುವುದು.
•ಸಂತ ಶಿಶುನಾಳ ಶರೀಫ, ವೀರರಾಣಿ ಬೆಳವಡಿ ಮಲ್ಲಮ್ಮ ಹೆಸರಿನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾನ ಸ್ಥಾಪಿಸುವುದು.
•ಡಾ.ಯು.ಆರ್.ಅನಂತಮೂರ್ತಿ ಹೆಸರಿನಲ್ಲಿ ಕುವೆಂಪು ವಿವಿಯಲಿ ಒಂದು ಅಧ್ಯಯನ ಪೀಠ.
•ಗೋರ್ ಬಂಜಾರ ಸಮುದಾಯದ ಇತಿಹಾಸ, ಸಂಸ್ಕೃತಿ, ಭಾಷೆ ಇತ್ಯಾದಿಗಳನ್ನು ದಾಖಲಿಸಲು ‘ಬಂಜಾರ ವಿಶ್ವಕೋಶ’ ಪ್ರಕಟಿಸುವುದು.
•ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ.ಡಿ.ಆರ್.ನಾಗರಾಜ ಹೆಸರಿನಲ್ಲಿ ಟ್ರಸ್ಟ್ ರಚಿಸಲು ಕ್ರಮ.
•‘ಕೊಳಗ’ ಕಾದಂಬರಿಯನ್ನು ಆಧರಿಸಿದ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸುವುದು.
•ಕುವೆಂಪುರವರ ಮಲೆಗಳಲ್ಲಿ ಮದುಮಗಳು ರಂಗರೂಪಕದಂತೆ ಖ್ವಾಜಾ ಬಂದೇ ನವಾಜ್ರವರ ಕುರಿತು ಅಹೋರಾತ್ರಿ ನಾಟಕ ಏರ್ಪಡಿಸುವುದು.
•ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ (ಕಾವಾ) ಸಂಸ್ಥೆಯ ಆವರಣದಲ್ಲಿ ಸುಸಜ್ಜಿತ ಕಲಾ ಗ್ಯಾಲರಿ ಸಭಾಂಗಣ ನಿರ್ಮಾಣ ಇತ್ಯಾದಿ ಮೂಲಸೌಕರ್ಯಗಳನ್ನು ಕಲ್ಪಿಸಲು ಎರಡು ಕೋಟಿ ರೂ. ಗಳನ್ನು ಒದಗಿಸುವುದು.
•ಹವ್ಯಕ ಭಾಷಾʼ ಅಕಾಡೆಮಿಯನ್ನು ಸ್ಥಾಪಿಸುವುದು.
•‘ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಕೃತಿಯನ್ನು ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿಸುವುದು.
•ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಿಗಾಗಿ ಎರಡು ಕೋಟಿ ರೂ. ಅನುದಾನ.
•ಕೋಲಾರದ ‘ಆದಿಮ’, ಮೈಸೂರಿನ ‘ರಂಗನಿರಂತರ, ಮತ್ತು ಬೆಂಗಳೂರಿನ ‘ಸಮುದಾಯ’ ಸಂಸ್ಥೆಗಳಿಗೆ ಅನುದಾನ ನೀಡುವುದು.
• ಕರಗ ಉತ್ಸವಕ್ಕೆ ಎರಡು ಕೋಟಿ ರೂ.ಗಳ ಅನುದಾನ.
•ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಮಂದಿರವನ್ನು ಉನ್ನತೀಕರಿಸಲು ಮೂರು ಕೋಟಿ ರೂ.ಅನುದಾನ.







