ಕರಾವಳಿಯ ವಿಶೇಷ ಪ್ರವಾಸೋದ್ಯಮ ಸಾಮರ್ಥ್ಯದ ಸದುಪಯೋಗಕ್ಕಾಗಿ 'ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ'

ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶೇಷ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ʻಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆʼಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕರಾವಳಿಗೆ ಕೆಲವೊಂದು ಕೊಡುಗೆಗಳನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.
ಕರಾವಳಿಯ ಪ್ರವಾಸಿ ತಾಣಗಳಲ್ಲಿ ವಾಯುಯಾನ ಹಾಗೂ ಜಲಸಾಹಸ ಪ್ರವಾಸೋದ್ಯಮ ಭಾಗೀದಾರರ ಸಹಯೋಗದೊಂದಿಗೆ Sea Plane ಹಾಗೂ Heli Taxiಗಳ ಮುಖಾಂತರ ಸಂಪರ್ಕ ಕಲ್ಪಿಸಲಾಗುವುದು. ಜೊತೆಗೆ Joy Ride ಹಾಗೂ River Cruise ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಡಿಕೆ ಬೆಳೆಯ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳ ಮತ್ತು ತೆಂಗು ಬೆಳೆಯ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣಗಳ ನಿಯಂತ್ರಣಕ್ಕಾಗಿ ವಿಶ್ವವಿದ್ಯಾನಿಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಸಮುದಾಯ ಆಧಾರಿತ ರೋಗ–ಕೀಟ ನಿಯಂತ್ರಣ ಕ್ರಮಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.
ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆ ಕಿಟ್ ಮೌಲ್ಯದ ದರವನ್ನು 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸಿ ಮೀನುಗಾರಿಕೆ ಚಟುವಟಿಕೆಗಳನ್ನು ಉತ್ತೇಜಿಸಲಾಗುವುದು.
ಜೈವಿಕ ತಂತ್ರಜ್ಞಾನದ ಉದ್ಯಮಗಳು, ನವೀನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಮುದ್ರ ಕೃಷಿಯನ್ನು (Mariculture)ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ Centre of Excellence ಸ್ಥಾಪಿಸಲಾಗುವುದು.
ಮೀನು ಆಹಾರದ ಸೇವನೆಯನ್ನು ಉತ್ತೇಜಿಸುವ ಹಾಗೂ ಸಾರ್ವಜನಿಕರಿಗೆ ಸ್ವಚ್ಛ ಮತ್ತು ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸ್ಯದರ್ಶಿನಿಗಳನ್ನು ಸ್ಥಾಪಿಸಲಾಗುವುದು.
ಮೀನು ಮಾರಾಟ ಮಾಡಲು ಸುಸಜ್ಜಿತ ಮೀನು ಮಾರುಕಟ್ಟೆಗಳ ಅವಶ್ಯಕತೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು.
ರಾಜ್ಯದಲ್ಲಿ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಗಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಒಳನಾಡು ಮೀನುಗಾರಿಕೆಯು ಗ್ರಾಮೀಣ ಜೀವನೋಪಾಯ ಮತ್ತು ಆಹಾರ ಭದ್ರತೆಗೆ ಮಹತ್ವವಾಗಿದೆ. ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನದಿ, ಕೆರೆ, ಕೃಷಿ ಹೊಂಡ ಹಾಗೂ ಜಲಾಶಯಗಳಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ ತರಬೇತಿ ನೀಡಿ ಸ್ಥಿರ ಆದಾಯ ಗಳಿಕೆಗೆ ಅವಕಾಶ ಕಲ್ಪಿಸಲಾಗುವುದು.
ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಂಪರ್ಕ ರಹಿತ ಜನವಸತಿ ಪ್ರದೇಶಗಳಿಗೆ ಸಾರ್ವಜನಿಕರ ಮತ್ತು ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗಾಗಿ 300 ಕಾಲುಸಂಕಗಳನ್ನು (Foot Bridge) ನಿರ್ಮಿಸಲಾಗುವುದು.
ಬಂದರುಗಳು ಮತ್ತು ಸರಕು ಸಾಗಣೆ ವಲಯದ ಅಭಿವೃದ್ಧಿಗಾಗಿ ʻಸಮಗ್ರ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ನೀತಿʼ ಅನ್ನು ರೂಪಿಸಲಾಗುವುದು.
ಪಂಜರ ಮೀನು ಸಾಕಣೆ, ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಸಂಬಂಧಿತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ʻKarnataka State Off Shore Resources Development & Utilization Policyʼ ಅನ್ನುರೂಪಿಸಲಾಗುವುದು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಉದ್ದೇಶಿಸಿದೆ.
ಮಂಗಳೂರು ಕೇಂದ್ರ ಕಾರಾಗೃಹದ ಎರಡನೇ ಹಂತದ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಹಿಂದಿನ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು 300 ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಲು ಅನುಮೋದಿಸಲಾಗಿದೆ. ಅದರ ಕಾರ್ಯಾಚರಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಕಾರವಾರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಸಂಖ್ಯಾಬಲದ 10 ವಸತಿ ನಿಲಯಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಪ್ರಾರಂಭಿಸಲಾಗುವುದು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಬೇಡಿಕೆಯಿರುವ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ದ.ಕ. ಜಿಲ್ಲೆಯ ಮಾಣಿ ಮತ್ತು ಸಜಿಪ ನಡು ಎಂಬಲ್ಲಿ ನೂತನ ಪೊಲೀಸ್ ಠಾಣೆಗಳು ಸ್ಥಾಪನೆಯಾಗಲಿವೆ.







