ಕರ್ನಾಟಕವು ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿ: ಸಿದ್ದರಾಮಯ್ಯ
ಕ್ವಾಂಟಮ್ ಇಂಡಿಯಾ ಶೃಂಗಸಭೆ 2025 ಉದ್ಘಾಟಿಸಿದ ಮುಖ್ಯಮಂತ್ರಿ

ಬೆಂಗಳೂರು: ಐಟಿ, ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಮುಂಚಿನಿಂದಲೂ ಸಮರ್ಥ ವಾಗಿರುವ ಕರ್ನಾಟಕ, ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಹೇಳಿದ್ದಾರೆ
ಬೆಂಗಳೂರಿನ ಹೋಟೆಲ್ ದಿ ಹಿಲ್ಟನ್, ಗ್ರ್ಯಾಂಡ್ ಬಾಲ್ ರೂಂನಲ್ಲಿ 'ಕ್ವಾಂಟಮ್ ಇಂಡಿಯಾ ಶೃಂಗಸಭೆ 2025' ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಐಎಸ್ಸಿ ಕ್ವಾಂಟಮ್ ಟೆಕ್ನಾಲಜಿ ಇನಿಷಿಯೇಟಿವ್ ಹಾಗೂ ರಾಷ್ಟ್ರೀಯ ಕ್ವಾಂಟಮ್ ಮಿಷನ್ ಸಹಯೋಗದೊಂದಿಗೆ ಆಯೋಜಿಸಿರುವ ಈ ಕಾರ್ಯಕ್ರಮ ಭಾರತದ ಕ್ವಾಂಟಮ್ ಪಯಣದಲ್ಲಿ ಒಂದು ಮೈಲಿಗಲ್ಲು. ಈ ವೇದಿಕೆಯನ್ನು ಸಹಯೋಗ, ನಾವೀನ್ಯತೆ ಮತ್ತು ರಿಯಲ್ ವರ್ಲ್ಡ್ ಕ್ವಾಂಟಮ್ ಅಪ್ಲಿಕೇಶನ್ಸ್ ನ ಜಾಗತಿಕ ಕೇಂದ್ರವಾಗಿಸುವುದು ನಮ್ಮ ಉದ್ದೇಶ ಎಂದು ಸಿಎಂ ಹೇಳಿದರು.
ಭಾರತದ ಕ್ವಾಂಟಮ್ ಕ್ರಾಂತಿಯನ್ನು ಕರ್ನಾಟಕ ಮುನ್ನಡೆಸುವುದನ್ನು ಖಾತ್ರಿಪಡಿಸಲು ಐದು ಪ್ರಮುಖ ಸ್ತಂಭಗಳ ಮೇಲೆ ನಮ್ಮ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಮೊದಲನೆಯದಾಗಿ ಕೌಶಲ್ಯಾಭಿವೃದ್ಧಿ: 20ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕ್ವಾಂಟಮ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸುತ್ತೇವೆ ಹಾಗೂ ಪ್ರತಿ ವರ್ಷ 150 ಪಿ ಎಚ್. ಡಿ ಫೆಲೋಶಿಪ್ ಗಳಿಗೆ ನೆರವು ನೀಡಲಾಗುತ್ತಿದೆ.
1000- ಕ್ಯೂಬಿಟ್ ಪ್ರೊಸೆಸರ್ಗಳನ್ನು ಒಳಗೊಂಡಂತೆ ಅತ್ಯಾಧುನಿಕ ಕ್ವಾಂಟಮ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆರೋಗ್ಯ ರಕ್ಷಣೆ, ರಕ್ಷಣಾ ಮತ್ತು ಸೈಬರ್ ಭದ್ರತೆಯಲ್ಲಿ ಪ್ರಾಯೋಗಿಕವಾದ ನೈಜ-ಪ್ರಪಂಚದ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.
ಅದೇರೀತಿ ಭಾರತದ ಪ್ರಥಮ ಕ್ವಾಂಟಮ್ ಹಾರ್ಡ್ವೇರ್ ಪಾರ್ಕ್, 4 ನಾವೀನ್ಯತಾ ವಲಯಗಳು ಹಾಗೂ ಕ್ವಾಂಟಮ್ ಘಟಕಗಳ ಸ್ಥಳಿಯ ಉತ್ಪಾದನೆಯನ್ನು ಉತ್ತೇಜಿಸಲು ಮೀಸಲಿಡಲಾದ ಫ್ಯಾಬ್ ಲೈನ್ ನ್ನು ಕರ್ನಾಟಕ ಸ್ಥಾಪಿಸಲಿದೆ.
ನೂರಕ್ಕೂ ಹೆಚ್ಚು ಸ್ಟಾರ್ಟಪ್ ಗಳಿಗೆ ಪೋಷಣೆ, ನೂರಕ್ಕೂ ಹೆಚ್ಚು ಪೇಟೆಂಟ್ ಗಳನ್ನು ದಾಖಲಿಸಲು ನೆರವು ನೀಡುವುದು ಮತ್ತು ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಸಹಾಯ ಒದಗಿಸಲು ಕ್ವಾಂಟಮ್ ವೆಂಚರ್ ಕ್ಯಾಪಿಟಲ್ ಫಂಡ್ ಅನ್ನು ಪ್ರಾರಂಭಿಸಲಾಗುವುದು.
ಜಾಗತಿಕ ಪಾಲುದಾರಿಕೆಗಳು ಇಂಡಿಯಾ ಕ್ವಾಂಟಮ್ ಸಮಾವೇಶ ಹಾಗೂ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗ ದಂತಹ ಕ್ರಮಗಳ ಮೂಲಕ ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ಕೇಂದ್ರವನ್ನಾಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಮಾತನಾಡಿ, ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ನಮ್ಮ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಸರಕಾರ ಕ್ಯೂ-ಸಿಟಿ (Q- ಸಿಟಿ (ಕ್ವಾಂಟಮ್) ನಗರಿಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.







