ಜಂಟಿ ಅಧಿವೇಶನ : ಒಂದೇ ಸಾಲಿನಲ್ಲಿ ಭಾಷಣ ಮುಗಿಸಿ ಹೊರ ನಡೆದ ರಾಜ್ಯಪಾಲರು

ಬೆಂಗಳೂರು: ಇಂದಿನಿಂದ ಆರಂಭವಾದ ವಿಧಾನಮಂಡಲದ ಜಂಟಿ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹಾಜರಾದರು.
ಮನರೇಗಾ ಯೋಜನೆಯ ಹೆಸರನ್ನು ಬದಲಾವಣೆ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ರಾಜ್ಯ ಸರ್ಕಾರ ಜನವರಿ 31ರವರೆಗೆ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದರು.
ನಂತರ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದ ನಿಯೋಗವು ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಇದರ ಬೆನ್ನಲ್ಲೇ ಇಂದು ವಿಶೇಷ ಅಧಿವೇಶನಕ್ಕೆ ಹಾಜರಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೆಲವೇ ಅಂಶಗಳನ್ನು ಒಂದೇ ಸಾಲಿನಲ್ಲಿ ಉಲ್ಲೇಖಿಸಿ ಭಾಷಣವನ್ನು ಮುಗಿಸಿ ಸದನದಿಂದ ಹೊರನಡೆದರು.
ಈ ವೇಳೆ ರಾಜ್ಯಪಾಲರ ನಡೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರು ಹೊರನಡೆಯುತ್ತಿದ್ದಂತೆಯೇ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಅಡ್ಡಬಂದು, ಪೂರ್ಣ ಭಾಷಣವನ್ನು ಓದಬೇಕೆಂದು ರಾಜ್ಯಪಾಲರಿಗೆ ಪಟ್ಟು ಹಿಡಿದರು.





