ನಾಳೆ (ಮೇ 16) ಕರ್ನಾಟಕ ಮುಸ್ಲಿಮ್ ಸಮಾವೇಶ

ಬೆಂಗಳೂರು : ಕರ್ನಾಟಕ ಮುಸ್ಲಿಮ್ ಸಮಾವೇಶ ನಾಳೆ(ಮೇ 16) ಬೆಂಗಳೂರಿನ ಪುರಭವನ ಸಭಾಂಗಣದಲ್ಲಿ ನಡೆಯಲಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿರುವ ‘ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ಎಂಬ ವರದಿ ಹಾಗೂ ಆಗ್ರಹಗಳ ಪಟ್ಟಿ ಬಿಡುಗಡೆ ಆಗಲಿದೆ.
ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧೆಡೆಗಳ ಸಾಮುದಾಯಿಕ ಸಂಘಟನೆಗಳ ನಾಯಕರು, ಉಲೇಮಾಗಳು, ಜಮಾಅತ್ ಗಳ ಮುಖಂಡರು, ವಕೀಲರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರುಗಳು ಸಾಕ್ಷಿಯಾಗಲಿದ್ದಾರೆ.
ಪ್ರಮುಖವಾಗಿ, ಮೀಸಲಾತಿ ರದ್ದತಿ, ದ್ವೇಷ ಭಾಷಣ-ದ್ವೇಷ ಅಪರಾಧ, ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಫ್ ವಿಷಯ, ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ-ಶಿಕ್ಷಣ ಕ್ಷೇತ್ರದ ಅನುದಾನ’ ಸಹಿತ ವಿವಿಧ ವಿಷಯಗಳನ್ನು ಪ್ರಸ್ತಾಪ ಮಾಡುವ ಜತೆಗೆ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸಮಾವೇಶದ ಆಯೋಜಕರು ಉಲ್ಲೇಖಿಸಿದ್ದಾರೆ.
ಸಮಾವೇಶಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ಇರುವುದಿಲ್ಲ. ಜತೆಗೆ ಈ ಸಮಾವೇಶದಲ್ಲಿ ಯಾರ ಜೊತೆಗೂ ಸಂಘರ್ಷದ ಉದ್ದೇಶ ಇಟ್ಟುಕೊಂಡಿಲ್ಲ.ಆದರೆ, ಮುಸ್ಲಿಮ್ ಸಮುದಾಯದ ಏಳಿಗೆಗೆ ರಾಜ್ಯ ಕಾಂಗ್ರೆಸ್ ಸರಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಕೇಳಬೇಕಾಗಿದೆ. ರಾಜ್ಯದ ಮುಸ್ಲಿಮರು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಆದರೆ, ಆ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದನ್ನು ಪ್ರಶ್ನೆ ಮಾಡಬೇಕಾಗಿದೆ ಎಂದೂ ಸಮಾವೇಶದ ಆಯೋಜಕರು ತಿಳಿಸಿದ್ದಾರೆ.
‘ವದಂತಿಗಳಿಗೆ ಕಿವಿಗೂಡಬೇಡಿ’: ಬೆಂಗಳೂರಿನ ಪುರಭವನ ಸಭಾಂಗಣದಲ್ಲಿ ಮೇ 16ರ ಬೆಳಗ್ಗೆ 10.30ಕ್ಕೆ ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಯೋಜಿಸಿರುವ ಕರ್ನಾಟಕ ಮುಸ್ಲಿಮ್ ಸಮಾವೇಶ ಈ ಹಿಂದೆ ನಿಗದಿಪಡಿಸಿದಂತೆಯೇ ನಡೆಯಲಿದ್ದು, ವದಂತಿಗಳಿಗೆ ಕಿವಿಗೂಡಬೇಡಿ’ ಎಂದು ಸಮಾವೇಶದ ಸಂಚಾಲಕರಾದ ಸುಹೈಲ್ ಅಹ್ಮದ್ ಮರೂರು, ತನ್ವೀರ್ ಅಹ್ಮದ್ ಹಾಗೂ ಯಾಹ್ಯ ದಾಮುದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಮಾವೇಶದ ತಯಾರಿ ಅಂತಿಮ ಹಂತದಲ್ಲಿದೆ. ರಾಜ್ಯದ ಎಲ್ಲೆಡೆಯಿಂದ ಹಲವು ಮುಸ್ಲಿಮ್ ಸಂಘಟನೆಗಳು, ಸಂಘ ಸಂಸ್ಥೆಗಳು, ಜಮಾಅತ್‍ಗಳು ಸಮಾವೇಶಕ್ಕೆ ಬೆಂಬಲ ಸೂಚಿಸಿ ಸಕ್ರಿಯವಾಗಿ ಭಾಗವಹಿಸುವ ಭರವಸೆ ನೀಡಿವೆ. ಸಮಾವೇಶ ನಿಗದಿಯಂತೆಯೇ ನಡೆಯಲಿದೆ ಎಂದು ಸಂಘಟಕರು ಹೇಳಿದ್ದಾರೆ.
ಹಿಜಾಬ್ ಮೇಲಿನ ನಿರ್ಬಂಧವನ್ನು ಸರಕಾರ ಹಿಂಪಡೆದಿದೆ. ಆದರೆ 9 ಪ್ರಮುಖ ಬೇಡಿಕೆಗಳು ಈಡೇರಬೇಕಿದೆ. ಆ ನ್ಯಾಯಯುತ ಬೇಡಿಕೆಗಳನ್ನು ತಡಮಾಡದೆ ಈಡೇರಿಸುವಂತೆ ಸರಕಾರಕ್ಕೆ ಹೇಳಲು ಈ ಸಮಾವೇಶ ನಡೆಯಲಿದೆ ಎಂದು ಸಂಘಟಕರು ಉಲ್ಲೇಖಿಸಿದ್ದಾರೆ.






