ಬಸವಣ್ಣನವರ ಕುರಿತು ಆಕ್ಷೇಪಾರ್ಹ ಬರಹ, ಹೇಳಿಕೆಗಳ ವಿರುದ್ಧ ಕಾನೂನು ಕ್ರಮಕ್ಕೆ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಆಗ್ರಹ

ಬೆಂಗಳೂರು: ಲೇಖಕ ರವಿ ಹಂಜ್ ಅವರು ಲಿಂಗಾಯತ ಧರ್ಮ ಹಾಗೂ ಬಸವಣ್ಣನವರ ಕುರಿತು ಬರೆದಿರುವ ಮತ್ತು ವಿಶ್ವವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ ಅವರು ಪ್ರಕಟಿಸಿರುವ ಆಕ್ಷೇಪಾರ್ಹ ಲೇಖನಗಳು, ಪುಸ್ತಕ ಹಾಗೂ ವೀಡಿಯೊಗಳನ್ನು ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ (KRMO) ಖಂಡಿಸಿದೆ.
ಬಸವಣ್ಣನವರು ಇಡೀ ನಾಡು ಮಾತ್ರವಲ್ಲದೆ ದೇಶ-ವಿದೇಶಗಳ ಜನರಿಂದಲೂ ಗೌರವಿಸಲ್ಪಡುವ ಮಹಾನ್ ವ್ಯಕ್ತಿತ್ವವಾಗಿದ್ದಾರೆ. ಅವರ ಆದರ್ಶ ಬದುಕು ಹಾಗೂ ಶ್ರೇಷ್ಠ ಬೋಧನೆಗಳನ್ನು ಇಂದಿಗೂ ದೊಡ್ಡ ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ ಎಂದು ಒಕ್ಕೂಟದ ಸಂಚಾಲಕ ಸುಹೈಲ್ ಅಹ್ಮದ್ ಮರೂರ್ ತಿಳಿಸಿದ್ದಾರೆ.
ಅಂತಹ ಮಹಾನ್ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಿಂದನಾತ್ಮಕ ಹೇಳಿಕೆಗಳನ್ನು ನೀಡುವುದು ಹಾಗೂ ವಿವಿಧ ಜಾತಿ-ಧರ್ಮಗಳ ನಡುವೆ ವೈಷಮ್ಯ ಮತ್ತು ದ್ವೇಷದ ವಿಷಬೀಜ ಬಿತ್ತುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕೃತ್ಯಗಳು ನಾಡಿನ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸಮತೋಲನಕ್ಕೆ ಧಕ್ಕೆ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ, ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವುದು ಶ್ಲಾಘನೀಯ. ಯಾವುದೇ ಸಮುದಾಯದ ಧಾರ್ಮಿಕ ನಂಬಿಕೆಗಳು, ಧಾರ್ಮಿಕ ಸಂಕೇತಗಳು ಹಾಗೂ ಧಾರ್ಮಿಕ ಸ್ಥಳಗಳ ಬಗ್ಗೆ ಯಾರೂ ಅವಹೇಳನಕಾರಿಯಾಗಿ ಮಾತನಾಡಲು ಅಥವಾ ಬರೆಯಲು ಅವಕಾಶ ನೀಡಬಾರದು. ಇಂತಹ ಕೃತ್ಯ ಎಸಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಲು ಇದು ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಬರಹ, ಹೇಳಿಕೆ ಹಾಗೂ ಕೃತ್ಯಗಳ ಮೂಲಕ ಸಮಾಜದಲ್ಲಿ ದ್ವೇಷ ಹರಡುವವರಿಗೆ ಕಡಿವಾಣ ಹಾಕಲು ಅಂತಹ ಶಕ್ತಿಗಳ ವಿರುದ್ಧ ಸೂಕ್ತ ಕಾನೂನನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ ಎಂದು ಸುಹೈಲ್ ಅಹ್ಮದ್ ಮರೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






