KPSC 384 ಗಝೆಟೆಡ್ ಪ್ರೊಬೇಷನರ್ ನೇಮಕಾತಿ ಅಧಿಸೂಚನೆ ರದ್ದುಪಡಿಸಿದ ಕೆಎಟಿ

ಬೆಂಗಳೂರು: ಸರಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶದ ಆಧಾರದಲ್ಲಿ, ಕರ್ನಾಟಕ ಲೋಕಸೇವಾ ಆಯೋಗ(KPSC)ವು 2024ರ ಫೆಬ್ರುವರಿ 26ರಂದು ಹೊರಡಿಸಿದ್ದ 384 ಗೆಝಟೆಡ್ ಪ್ರೊಬೇಷನರ್ ನೇಮಕ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ರದ್ದುಪಡಿಸಿದೆ
384 ಗೆಝೆಟೆಡ್ ಪ್ರೊಬೇಷನರ್ ನೇಮಕ ಅಧಿಸೂಚನೆಯನ್ನು ಪ್ರಶ್ನಿಸಿ 3ಎ ಕೆಟಗರಿಗೆ ಸೇರಿದ ಚನ್ನಪಟ್ಟಣದ ಬಿ.ಎನ್.ಮಧು ಎಂಬವರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ ಅಧ್ಯಕ್ಷ ಆರ್.ಬಿ.ಬೂದಿಹಾಳ್ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್ ಅವರಿದ್ದ ಪೀಠ ಕಳೆದ ಮೇ 28ರಂದು ಈ ಕುರಿತಂತೆ ಆದೇಶ ಹೊರಡಿಸಿದೆ.
ಕೆಎಎಸ್ ಹುದ್ದೆಗಳ ಭರ್ತಿ ಜೊತೆಗೆ 2022ರ ಡಿಸೆಂಬರ್ 12ರಂದು ಸರಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ರದ್ದುಗೊಳಿಸಿರುವ ಪೀಠ, 'ಕಾನೂನು ಪ್ರಕಾರ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು KPSC ಸ್ವತಂತ್ರವಿದೆ’ ಎಂದು ಸ್ಪಷ್ಟಪಡಿಸಿದೆ.
‘ಅಂದಿನ ರಾಜ್ಯ ಸರಕಾರ 2022ರ ಅಕ್ಟೋಬರ್ 23ರಂದು ಹೊರಡಿಸಿದ್ದ ಸುಗ್ರೀವಾಜ್ಞೆಯು ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿದೆ. ಇದನ್ನು ಆಧರಿಸಿ 2022ರ ಡಿಸೆಂಬರ್ 28ರಂದು ಅಧಿಸೂಚನೆ ಪ್ರಕಟಿಸಿ ರೋಸ್ಟರ್ ಅಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಶಾಸನಸಭೆಯ ಅನುಮತಿ ಪಡೆದಿರಲಿಲ್ಲ ಎಂಬುದು ಗಮನಾರ್ಹ. ಹಾಗಾಗಿ, ಇದರ ಆಧಾರದಡಿ ರಚಿಸಲಾದ 2023ರ ನಿಯಮಾವಳಿ ಊರ್ಜಿತವಲ್ಲ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.







