ಭಾರತದ ವಿದೇಶಾಂಗ ನೀತಿ ನಿಯಂತ್ರಣ ಹೊಸದಿಲ್ಲಿ ಬದಲು ವಾಷಿಂಗ್ಟನ್‍ನಲ್ಲಿದೆ: ಕೆ.ಸಿ.ವೇಣುಗೋಪಾಲ್

ಬೆಂಗಳೂರು : ಭಾರತ ದೇಶದ ವಿದೇಶಾಂಗ ನೀತಿ ಹೊಸದಿಲ್ಲಿಯಿಂದ ನಿಯಂತ್ರಿಸುತ್ತಿಲ್ಲ, ಬದಲಿಗೆ ವಾಷಿಂಗ್ಟನ್‍ನಿಂದ ನಿಯಂತ್ರಿಸಲಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ.ವೇಣುಗೋಪಾಲ್ ಆರೋಪಿಸಿದ್ದಾರೆ.
ಬುಧವಾರ ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ನಡೆದ ‘ಜೈ ಹಿಂದ್ ಸಭಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ವಿದೇಶಾಂಗ ನೀತಿ ವಿದೇಶದ ಶಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿದೆಯೇ? ಈ ವಿಚಾರದಲ್ಲಿ ಪ್ರಧಾನಮಂತ್ರಿ ಮೋದಿಯವರ ಮೌನ ನಮ್ಮ ವಿದೇಶಾಂಗ ನೀತಿ ಬಲಿಷ್ಠವಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದರು.
ಕೇಂದ್ರ ಸರಕಾರ ಆಪರೇಷನ್ ಸಿಂಧೂರವನ್ನು ಏಕಾಏಕಿ ನಿಲ್ಲಿಸಿದ್ದು ಏಕೆ? ಈ ವಿಚಾರವಾಗಿ ದೇಶಕ್ಕೆ ವಿವರಣೆ ನೀಡಿಲ್ಲ ಏಕೆ? ಈ ಕದನ ವಿರಾಮದ ನಿಬಂಧನೆಗಳೇನು? ಕದನ ವಿರಾಮ ಘೋಷಣೆಯ ಯಶಸ್ಸನ್ನು ಅಮೆರಿಕ ಅಧ್ಯಕ್ಷರು ಪಡೆದಿರುವ ಬಗ್ಗೆ ಪ್ರಧಾನಿ ಮೋದಿಯವರು ಮೌನವಾಗಿರುವುದೇಕೆ?, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ ನಿರ್ಬಂಧದ ಬೆದರಿಕೆ ಹಾಕಿ ಈ ಕದನ ವಿರಾಮ ಘೋಷಿಸಿದರೇ? ಎಂದು ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದರು.
ಕಾಶ್ಮೀರ ಉಭಯ ದೇಶಗಳ ನಡುವಣ ವಿಚಾರ ಎಂದು ನಾವು ಅನೇಕ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೆವು. ಮೂರನೇ ದೇಶ ಇದರಲ್ಲಿ ಹಸ್ತಕ್ಷೇಪ ಮಾಡಲು ನಾವು ಅವಕಾಶ ನೀಡಿರಲಿಲ್ಲ. ಆದರೆ, ಈಗ ಅಮೆರಿಕ ಮಧ್ಯಪ್ರವೇಶ ಮಾಡುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು. ಅಮೆರಿಕ ಪದೇ ಪದೆ ಈ ವಿಚಾರದಲ್ಲಿ ಮಧ್ಯಸ್ಥಿಕೆ ಬಗ್ಗೆ ಮಾತನಾಡುತ್ತಿರುವುದೇಕೆ? ಅವರ ಉದ್ದೇಶವಾದರೂ ಏನು? ಎಂದು ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದರು.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಕನ್ನಡಿಗರು ಹಾಗೂ ಕೇರಳದ ಪ್ರಜೆಗಳು ಹತರಾಗಿದ್ದರು. ಪ್ರವಾಸಿಗರ ಹೆಸರು ಕೇಳಿ ಹತ್ಯೆ ಮಾಡಿರುವುದು ನಮ್ಮ ದೇಶದಲ್ಲಿ ಕೋಮು ವಿಭಜನೆ ಮಾಡುವ ಪ್ರಯತ್ನ ನಡೆದಿರುವುದು ಸ್ಪಷ್ಟವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಭಾರತ ಜಾತಿ, ಧರ್ಮ, ಭಾಷೆ ಮೀರಿ ಒಟ್ಟಾಗಿ ನಮ್ಮ ಸೇನಾ ಪಡೆಗಳ ಜತೆ ನಿಂತಿದ್ದು ನಮಗೆ ಹೆಮ್ಮೆಯ ವಿಚಾರ ಎಂದು ಕೆ.ಸಿ.ವೇಣುಗೋಪಾಲ್ ತಿಳಿಸಿದರು.
ದಾಳಿಯಾದ 24 ತಾಸುಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಕೇಂದ್ರ ಸರಕಾರ ಹಾಗೂ ಭಾರತೀಯ ಸೇನೆ ಪರವಾಗಿ ನಿಲ್ಲುವ ನಿರ್ಣಯ ಕೈಗೊಂಡಿತು. ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ, ದೇಶಕ್ಕೆ ಆಪತ್ತು ಬಂದಾಗೆಲ್ಲ ಕಾಂಗ್ರೆಸ್ ಒಗ್ಗಟ್ಟಾಗಿ ದೇಶದ ಪರ ನಿಲ್ಲುತ್ತದೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ, ಪರಂಪರೆ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.







