ಕೆಸೆಟ್ ಪ್ರಮಾಣ ಪತ್ರ ವಿತರಿಸಿದ ಕೆಇಎ

ಬೆಂಗಳೂರು : ದಾಖಲೆ ಅವಧಿಯಲ್ಲಿ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್) ನಡೆಸಿ, ಫಲಿತಾಂಶ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಅಷ್ಟೇ ತ್ವರಿತವಾಗಿ ಅರ್ಹರ ದಾಖಲೆ ಪರಿಶೀಲಿಸಿ ಪ್ರಮಾಣ ಪತ್ರ ಕೊಡುವ ಕೆಲಸವನ್ನೂ ಶನಿವಾರ ಆರಂಭಿಸಿತು.
ನ.2ರಂದು ಕೆಸೆಟ್ ಲಿಖಿತ ಪರೀಕ್ಷೆ ಹಾಗೂ ನ.15ರಂದು ಫಲಿತಾಂಶ ಪ್ರಕಟಿಸಿತು. ನ.29ರಿಂದ ದಾಖಲೆ ಪರಿಶೀಲಿಸಿ, ಪ್ರಮಾಣ ಪತ್ರ ವಿತರಿಸುವ ಕೆಲಸಕ್ಕೂ ಚಾಲನೆ ನೀಡಿತು. ಕೆಇಎ ಕಚೇರಿಯ ನವೀಕೃತ ಸಭಾಂಗಣದಲ್ಲಿ ನಡೆದ ಪರಿಶೀಲನೆ ವೇಳೆ ಅರ್ಹರಾದ ಅಭ್ಯರ್ಥಿಗಳಿಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ, ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, ಕೆ-ಸೆಟ್ ಅಧ್ಯಕ್ಷರಾದ ವಿಶ್ರಾಂತ ಕುಲಪತಿ ಪ್ರೊ ಬಿ.ತಿಮ್ಮೇಗೌಡ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಿದರು.
ಕೆಸೆಟ್ ಅರ್ಹತೆ ಪಡೆದ ಬಿಎಂಟಿಸಿ ಕಂಡಕ್ಟರ್, ಪಾಲಿಕೆ ಮಾರ್ಷಲ್: ಶನಿವಾರ ಕೆಸೆಟ್ ಪ್ರಮಾಣ ಪತ್ರ ಪಡೆದವರಲ್ಲಿ ಬಿಎಂಟಿಸಿ ಕಂಡಕ್ಟರ್ ಜಯಮ್ಮ ಹಾಗೂ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಾರ್ಷಲ್ ಆಗಿ ಕಾರ್ಯನಿರ್ವಹಿಸುವ ಅರವಿಂದ ಅವರು ಸೇರಿದ್ದಾರೆ.





