ಕೆಇಎ: ಇಂದು, ನಾಳೆ ನೇಮಕಾತಿ ಪರೀಕ್ಷೆ

ಬೆಂಗಳೂರು : ತಾಂತ್ರಿಕ ಶಿಕ್ಷಣ, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್‍ಡಿಎಲ್, ಕೃಷಿ ಮಾರಾಟ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಜ.10 ಮತ್ತು ಜ.11ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದೆ.
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಜ.10ರಂದು ಬೆಂಗಳೂರು, ಕಲ್ಬುರ್ಗಿ ಮತ್ತು ಧಾರವಾಡದ 25 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯನ್ನು 9,936 ಮಂದಿ ಹಾಗೂ ಜ.11ರಂದು 12 ಜಿಲ್ಲೆಗಳ 259 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯನ್ನು 1.03 ಲಕ್ಷ ಮಂದಿ ಬರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಾರದರ್ಶಕ ಹಾಗೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಜತೆಗೆ ಜಾಮರ್ ಕೂಡ ಹಾಕಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮುಖಚಹರೆ ಪತ್ತೆ ತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತದೆ. ವಸ್ತ್ರ ಸಂಹಿತೆ ಇದ್ದು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.
ವಿವಿಧ ಹುದ್ದೆಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಯುತ್ತಿರುವುದರಿಂದ ತಮಗೆ ಅನ್ವಯವಾಗುವ ದಿನ ನಿಗದಿತ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಬೇಕು. ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.







