ಕೆಇಎ ನೇಮಕಾತಿ: ಕನ್ನಡ ಪರೀಕ್ಷೆಗೆ ಶೇ.31ರಷ್ಟು ಹಾಜರು

ಬೆಂಗಳೂರು : ವಿವಿಧ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಶನಿವಾರ ನಗರದಲ್ಲಿ ನಡೆದ ಕಡ್ಡಾಯ ಕನ್ನಡ ಪರೀಕ್ಷೆಗೆ ಶೇ.31ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡದಿರುವ ಅಭ್ಯರ್ಥಿಗಳು ನೇಮಕಾತಿ ಸಂದರ್ಭದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎನ್ನುವುದು ನಿಯಮ. ಆ ಪ್ರಕಾರ ಇಂದಿನ ಪರೀಕ್ಷೆಯನ್ನು 6,209 ಮಂದಿ ತೆಗೆದುಕೊಂಡಿದ್ದರು. ಆದರೆ ಹಾಜರಾಗಿದ್ದು 1,953 ಮಂದಿ ಮಾತ್ರ ಎಂದು ತಿಳಿಸಿದ್ದಾರೆ.
ಪೊಲೀಸ್ ಕಾನ್‍ಸ್ಟೇಬಲ್, ಗ್ರಾಮ ಆಡಳಿತ ಅಧಿಕಾರಿ, ಭೂಮಾಪಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಈ ಪರೀಕ್ಷೆ ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
Next Story




