KEO AI PC-2026 ಲೋಕಾರ್ಪಣೆಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಸರಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ಬಳಕೆಯು ಸಮಾನತೆ, ಅವಕಾಶ ಮತ್ತು ಬೆಳವಣಿಗೆಗೆ ಅಡಿಪಾಯವಾಗಿದ್ದು, ಈ ದಿಸೆಯಲ್ಲಿ ಇಂದು ಲೋಕಾರ್ಪಣೆಗೊಂಡ ಕೆಇಒ ಎಐ ಪಿಸಿ-2026 ಸಾಧನವು ಲಕ್ಷಾಂತರ ವಿದ್ಯಾರ್ಥಿಗಳನ್ನು ಸಬಲಗೊಳಿಸುವ ಸಾಧನವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಕಿಯೋನಿಕ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಕೃತಕ ಬುದ್ಧಿಮತ್ತೆ ಸನ್ನದ್ಧ ‘ಕೆಇಒ’ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದು ನಾವು ಕೇವಲ ಒಂದು ಉಪಕರಣವನ್ನು ಲೋಕಾರ್ಪಣೆ ಮಾಡುತ್ತಿಲ್ಲ. ಗ್ರಾಮೀಣ ಹಳ್ಳಿಗಳಿಂದ ಹಿಡಿದು ನಗರ ಕೇಂದ್ರಗಳವರೆಗೆ ಕರ್ನಾಟಕದ ಪ್ರತಿಯೊಂದು ಮಗುವೂ ಕಲಿಯಬೇಕು, ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಭವಿಷ್ಯವನ್ನು ರೂಪಿಸಬೇಕು ಎಂಬ ಕನಸಿಗೆ ಚಾಲನೆ ನೀಡುತ್ತಿದ್ದೇವೆ ಎಂದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಪಯಣ ಆಕಸ್ಮಿಕವಾಗಿ ನಡೆದಿದ್ದಲ್ಲ. ಇದನ್ನು ದೂರದೃಷ್ಟಿಯ ನಾಯಕರು ಮತ್ತು ಬದ್ಧತೆಯುಳ್ಳ ಸಂಸ್ಥೆಗಳು ನಿರ್ಮಿಸಿವೆ. ಎಲೆಕ್ಟ್ರಾನಿಕ್ಸ್ ಅಭಿವೃದ್ಧಿಯ ಆರಂಭಿಕ ದಿನಗಳಿಂದ ಹಿಡಿದು ಜಾಗತಿಕ ಐಟಿ ಶಕ್ತಿಯಾಗಿ ಹೊರಹೊಮ್ಮುವವರೆಗೆ, ಈ ರಾಜ್ಯವು ಯಾವಾಗಲೂ ನಾವೀನ್ಯತೆಯನ್ನು ನಂಬಿದೆ. ಕರ್ನಾಟಕವು ತಂತ್ರಜ್ಞಾನವನ್ನು ಕೇವಲ ಅಳವಡಿಸಿಕೊಳ್ಳಲಿಲ್ಲ ಭಾರತದ ಸಿಲಿಕಾನ್ ವ್ಯಾಲಿಯಾಗಲು ನಾವು ನಮ್ಮದೇ ಆದ ಹಾದಿಯನ್ನು ಕಂಡುಕೊಂಡೆವು ಎಂದು ಅವರು ಹೇಳಿದರು.
ದೇವರಾಜ ಅರಸು ಮತ್ತು ಎಸ್.ಎಂ.ಕೃಷ್ಣ ಅವರು ಸಂಪೂರ್ಣ ಪೀಳಿಗೆಯ ನಾವೀನ್ಯತೆಗೆ ಅಡಿಪಾಯ ಹಾಕಿಕೊಟ್ಟರು. ಈ ಯಶಸ್ವಿ ಪಯಣದಲ್ಲಿ ಕಿಯೋನಿಕ್ಸ್ ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಬೆಳವಣಿಗೆಗೆ ಕಿಯೋನಿಕ್ಸ್ ಬೆನ್ನೆಲುಬಾಗಿದೆ. ನಮ್ಮ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಿಯೋನಿಕ್ಸ್ ಪ್ರತ್ಯೇಕ ಯೋಜನೆಗಳಿಗೆ ಬೆಂಬಲ ನೀಡುವುದರಿಂದ ಹಿಡಿದು, ನಮ್ಮ ರಾಜ್ಯದ ಮೂಲೆ ಮೂಲೆಗೂ ತಲುಪುವ ಉಪಕ್ರಮಗಳ ನೇತೃತ್ವ ವಹಿಸುವವರೆಗೆ ಬೆಳೆದಿದೆ. ಕೆಇಒ ಈ ಬೆಳವಣಿಗೆಗೆ ಸೂಕ್ತ ಉದಾಹರಣೆಯಾಗಿದೆ. ತಾಂತ್ರಿಕ ನಾವೀನ್ಯತೆಯಿಂದ ಹಿಡಿದು ಲಕ್ಷಾಂತರ ವಿದ್ಯಾರ್ಥಿಗಳನ್ನು ಸಬಲಗೊಳಿಸುವ ಸಾಧನವಾಗಿ ಇದು ಹೊರಹೊಮ್ಮಿದೆ ಎಂದು ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರಿ ಶಾಲೆಗಳು ಯಾವಾಗಲೂ ನಮ್ಮ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿವೆ. ಆದರೂ, ಅವು ಡಿಜಿಟಲ್ ಕ್ರಾಂತಿಯಲ್ಲಿ ಹಿಂದುಳಿದಿವೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಇತ್ತೀಚಿನ ತಂತ್ರಜ್ಞಾನದ ಸೌಲಭ್ಯವಿದೆ. ನಮ್ಮ ಸರಕಾರಿ ಶಾಲೆಯ ವಿದ್ಯಾರ್ಥಿಗಳೂ ಅದೇ ಅವಕಾಶಕ್ಕೆ ಅರ್ಹರಾಗಿದ್ದಾರೆ. ನಾವು ಸರಕಾರಿ ಶಾಲೆಗಳಲ್ಲಿ 1 ಸಾವಿರ ಕೆಇಒ ಎಐ ಪಿಸಿ ಗಳೊಂದಿಗೆ ಸ್ಪಷ್ಟ ದೂರದೃಷ್ಟಿಯಿಟ್ಟುಕೊಂಡು ಪ್ರಾರಂಭಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಯೋಜನೆಯನ್ನು ಜಾರಿಗೊಳಿಸಿದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡರ ಪ್ರಯತ್ನವನ್ನು ಶ್ಲಾಘಿಸಿದರು. ಈ ಪಿಸಿ ಅಭಿವೃದ್ಧಿ ಪಡಿಸಿದ ಎಲ್ಲರನ್ನೂ ಮುಖ್ಯಮಂತ್ರಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ, ಉದ್ಯಮಿಗಳಾದ ಕ್ರಿಶ್ ಗೋಪಾಲಕೃಷ್ಣ, ಪ್ರಶಾಂತ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.






