ಸದನದಲ್ಲಿ ಪ್ರತಿಧ್ವನಿಸಿದ ಕೆರಗೋಡು ಧ್ವಜ ವಿವಾದ: ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೀಡಿದ ಸ್ಪಷ್ಟೀಕರಣ ಹಾಗೂ ಕಾಂಗ್ರೆಸ್ ಸದಸ್ಯ ರವಿಕುಮಾರ್ ಗಣಿಗ ಮಾಡಿದ ಆರೋಪದಿಂದಾಗಿ ಬುಧವಾರ ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದವೆ ನಡೆಯಿತು.
ಕೆರಗೋಡು ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬೆಳಗ್ಗೆ ಮಾತನಾಡುವಾಗ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸುತ್ತೇವೆ ಎಂದು ಗೌರಿಶಂಕರ ಟ್ರಸ್ಟ್ ನವರು ಗ್ರಾಮ ಪಂಚಾಯಿತಿಗೆ ಅರ್ಜಿಯನ್ನೆ ಕೊಟ್ಟಿರಲಿಲ್ಲ. ಅಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಹಾರಿಸಲು ಮಾತ್ರ ಅನುಮತಿಯಿತ್ತು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಗ್ರಾಮ ಪಂಚಾಯಿತಿ ವಿಧಿಸಿರುವ ಶರತ್ತಿಗೆ ಒಪ್ಪಿರುವುದಾಗಿಯೂ ಪ್ರಮಾಣಪತ್ರವನ್ನು ನೀಡಿದ್ದಾರೆ. ರಾಜಕೀಯ ಅಥವಾ ಧರ್ಮದ ಧ್ವಜ ಹಾರಿಸುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಇಷ್ಟಾದರೂ ಜ.26ರಂದು ರಾಷ್ಟ್ರಧ್ವಜ ಇಳಿಸಿ, ಅಂದೇ ಹನುಮಧ್ವಜವನ್ನು ಹಾರಿಸಲಾಗಿದೆ. ಧ್ವಜಸ್ತಂಬ ಇರುವುದು ಯಾವುದೋ ಖಾಸಗಿ ಜಾಗದಲ್ಲಿ ಅಲ್ಲ, ಸರಕಾರಿ ಜಾಗದಲ್ಲಿ ಎಂದು ಅವರು ತಿಳಿಸಿದರು.
ಈ ವೇಳೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ವಿರೋಧ ಪಕ್ಷದ ನಾಯಕರಿಗೆ ಸ್ಪಷ್ಟಣೆ ನೀಡಬೇಕಾಗಿರುವುದು ಗೃಹ ಸಚಿವರು. ತಾವು ಯಾವ ನಿಯಮದಡಿಯಲ್ಲಿ ಸ್ಪಷ್ಟೀಕರಣ ನೀಡುತ್ತೀದ್ದೀರಾ? ಇದಕ್ಕೆ ಅವಕಾಶವಿದೆಯೇ? ಎಂದರು.
ಇದಕ್ಕೆ ತಿರುಗೇಟು ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಿಮಗೆ ಸತ್ಯ ಹೇಳಿದರೆ ಯಾಕೆ ಸಿಟ್ಟು ಬರುತ್ತಿದೆ. ಸುಳ್ಳಿನ ರಾಜಕಾರಣವೇ ಬೇಕಾ?, ಸತ್ಯ ಹೊರಗೆ ಬರಬಾರದು ಎಂಬುದು ನಿಮ್ಮ ಬಯಕೆಯೇ? ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದು ನಿಮ್ಮ ಉದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತು ಮುಂದುವರೆಸಿದ ಚಲುವರಾಯಸ್ವಾಮಿ, ಮಂಡ್ಯ ಜಿಲ್ಲೆ ಸೌಹಾರ್ದ, ಜಾತ್ಯತೀತ ಮನೋಭಾವನೆಯನ್ನು ಹೊಂದಿರುವ ಜನರ ಜಿಲ್ಲೆ. ನಮ್ಮಲ್ಲಿ ಕೋಮುಗಲಭೆಗಳು ಇಲ್ಲ. ಜನ ಶಾಂತಿಯಿಂದ ಇದ್ದಾರೆ. ಧ್ವಜ ವಿವಾದದಿಂದ ಸರಕಾರದ ಆಸ್ತಿಪಾಸ್ತಿಗೆ ಲಕ್ಷಾಂತರ ರೂ.ಹಾನಿಯಾಗಿದೆ. ಅದರ ಹೊಣೆಯನ್ನು ವಿರೋಧ ಪಕ್ಷದ ನಾಯಕರೇ ವಹಿಸಿಕೊಳ್ಳಬೇಕು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಹೈಕಮಾಂಡ್ ದಾರಿ ತಪ್ಪಿಸಿ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದರು ಎಂದು ನೀಡಿದ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಕೆರಗೋಡು ಗ್ರಾಮದಲ್ಲಿ ಧ್ವಜ ವಿವಾದದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯವರು ಯಾರು ಗಲಾಟೆ ಮಾಡಿಲ್ಲ. ಆದರೆ, ಮಂಗಳೂರು, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಿಂದ ಕಾರ್ಯಕರ್ತರನ್ನು ಕರೆಸಿ ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಿಸಿದ್ದಾರೆ. ನಾವು ಒಕ್ಕಲಿಗರು ಒಕ್ಕಲುತನ ಮಾಡುವವರು. ನಮ್ಮ ಊರು ಶಾಂತವಾಗಿದೆ. ಚುನಾವಣೆಗಾಗಿ ಅಲ್ಲಿ ಬೆಂಕಿ ಹಚ್ಚಬೇಡಿ ಎಂದು ರವಿಕುಮಾರ್ ಗಣಿಗ ಹೇಳಿದರು.
ಮಂಗಳೂರು ಶಾಸಕರ ಆಕ್ಷೇಪ: ಕೆರಗೋಡಿನಲ್ಲಿ ಕಲ್ಲು ಹೊಡೆಯಲು ಮಂಗಳೂರಿನಿಂದ ಬಂದಿದ್ದರು ಎಂಬ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಹರೀಶ್ ಪೂಂಜ, ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಮಂಗಳೂರಿನಿಂದ ಯಾರು ಬಂದಿದ್ದರು ಎಂದು ಸ್ಪಷ್ಟೀಕರಣ ಕೊಡಿ ಎಂದು ಆಗ್ರಹಿಸಿದರು. ಈ ವೇಳೆ ವಿಪಕ್ಷ ನಾಯಕ ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ್ ಸೇರಿದಂತೆ ಇನ್ನಿತರ ಸದಸ್ಯರು ಮೌನವಾಗಿದ್ದರು. ಇದರಿಂದ ಸಿಟ್ಟಾದ ಹರೀಶ್ ಪೂಂಜ, ವಿಪಕ್ಷ ನಾಯಕರೇ ಅವರ ಮಾತನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.
ಅಲ್ಲದೆ, ಸದನದ ಬಾವಿಗಿಳಿದು ಧರಣಿ ನಡೆಸಲು ಅವರು ಮುಂದಾದರು. ಆಗ, ಆಗ ಸ್ಪೀಕರ್ ಯು.ಟಿ.ಖಾದರ್, ಅಂತಹ ಹೇಳಿಕೆಗಳು ಬಂದಿದ್ದರೆ ಅವುಗಳನ್ನು ಕಡತದಿಂದ ತೆಗೆಸುತ್ತೇನೆ ಎಂದು ಹೇಳಿದ ಬಳಿಕ ಬಿಜೆಪಿ ಸದಸ್ಯರು ಮೌನವಾದರು.







