ಅ.1ರಿಂದ 4ರ ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಜವಳಿ ಪ್ರದರ್ಶನ: ಲೋಗೋ ಅನಾವರಣಗೊಳಿಸಿದ ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು : ಭಾರತದ ಜವಳಿ ಮತ್ತು ಉಡುಪು ಉದ್ಯಮಕ್ಕೆ ಮುಂಬರುವ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒಂದಾಗಲಿರುವ ಫೆಡರೇಷನ್ ಆಫ್ ಇಂಡಸ್ಟ್ರೀಸ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್ ಆಯೋಜನೆಯ ‘ವರ್ಲ್ಡ್ ಟೆಕ್ಸೈಲ್ ಇಂಡಿಯಾ(ಡಬ್ಲ್ಯೂಟಿಐ)2026’ರ ಲೋಗೋವನ್ನು ನಗರದಲ್ಲಿ ಬುಧವಾರ ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ಅನಾವರಣಗೊಳಿಸಿದರು.
ಜೊತೆಗೆ, ಬೆಂಗಳೂರಿನ ವೈಟ್‍ಫೀಲ್ಡ್ ನಲ್ಲಿರುವ ಕೆಟಿಪಿಒನಲ್ಲಿ ಅಕ್ಟೋಬರ್ 1ರಿಂದ 4ರವರೆಗೆ ಜರುಗಲಿರುವ ಡಬ್ಲ್ಯೂಟಿಐನ ಮೊದಲ ಆವೃತ್ತಿಯಾದ ಜಾಗತಿಕ ಜವಳಿ ಪ್ರದರ್ಶನಕ್ಕೆ ಅಧಿಕೃತವಾಗಿ ಉದ್ಯಮಿಗಳು ಮತ್ತು ಸಾರ್ವಜನಿಕರಿಗೆ ಆಹ್ವಾನಿಸಲಾಯಿತು.
ಡಬ್ಲ್ಯೂಟಿಐ ಲೋಗೋ ಅನಾವರಣ ಬಳಿಕ ಮಾತನಾಡಿದ ಸಚಿವ ಕೆ.ಎಚ್.ಮುನಿಯಪ್ಪ, ವರ್ಲ್ಡ್ ಟೆಕ್ಸೈಲ್ ಇಂಡಿಯಾ-2026 ಭಾರತದ ಜವಳಿ ಕ್ಷೇತ್ರದ ಸಾಮಥ್ರ್ಯವನ್ನು ಜಾಗತಿಕ ಅವಕಾಶಗಳೊಂದಿಗೆ ಸಂಪರ್ಕಿಸುವ ಮಹತ್ವದ ಉಪಕ್ರಮವಾಗಿದೆ. ಬಲಿಷ್ಠ ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಬೆಂಗಳೂರು, ಈ ಅಂತಾರಾಷ್ಟ್ರೀಯ ವೇದಿಕೆಯ ಮೊದಲ ಆವೃತ್ತಿಯನ್ನು ಆಯೋಜಿಸಲು ಸೂಕ್ತ ನಗರವಾಗಿದೆ ಎಂದರು.
ಕರ್ನಾಟಕವು ಸದಾ ನವೀನತೆ, ಉದ್ಯಮಶೀಲತೆ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತಾ ಬಂದಿದೆ. ನಮ್ಮ ಜವಳಿ ಉದ್ಯಮಿಗಳು, ತಯಾರಕರು, ವಿನ್ಯಾಸಕರು ಮತ್ತು ರಫ್ತುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಇಂತಹ ಉಪಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ. ಹಿಂದಿನ ಮನಮೋಹನ್ ಸಿಂಗ್ ಸರಕಾರದಲ್ಲಿ ಕೇಂದ್ರದಲ್ಲಿ ಎಂಎಸ್‍ಎಂಇ ಮಂತ್ರಿಯಾಗಿದ್ದೆ, ಆಗ ಕೈಗಾರಿಕೆ ಮತ್ತು ಉದ್ದಿಮೆಗಳ ಬೆಳವಣಿಗೆಗೆ ಸಾಕಷ್ಟು ಒತ್ತು ನೀಡಿದ್ದೆ. ದೇಶವು ಆರ್ಥಿಕವಾಗಿ ಸದೃಢವಾಗಬೇಕಾದರೆ ಕೈಗಾರಿಕೆಗಳು, ಉದ್ಯಮಗಳು ಹೆಚ್ಚಾಗಬೇಕು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು
ಫೆಡರೇಷನ್ ಆಫ್ ಇಂಡಸ್ಟ್ರೀಸ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್‍ನ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ರಶೀದ್(ನಿವೃತ್ತ ಐಪಿಎಸ್) ಮಾತನಾಡಿ, ಅಕ್ಟೋಬರ್ 1ರಿಂದ 4ರವರೆಗೆ ನಡೆಯುವ ಜಾಗತಿಕ ಜವಳಿ ಪ್ರದರ್ಶನವು ಜವಳಿ ತಯಾರಕರು, ರಫ್ತುದಾರರು, ವಿನ್ಯಾಸಕರು, ಬ್ರ್ಯಾಂಡ್‍ಗಳು, ಉದ್ಯಮಿಗಳು, ಕೈಗಾರಿಕಾ ನಾಯಕರು ಹಾಗೂ ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಲಿದೆ ಎಂದರು.
ನಾಲ್ಕು ದಿನಗಳ ಈ ಜಾಗತಿಕ ಜವಳಿ ಪ್ರದರ್ಶನದಲ್ಲಿ ಸುಮಾರು 30 ದೇಶಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದ್ದು, ಕೆನಡಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ವಿಯೆಟ್ನಾಂ ಸೇರಿದಂತೆ ಪ್ರಮುಖ ಮಾರುಕಟ್ಟೆಗಳ ಪ್ರತಿಷ್ಠಿತ ಬ್ರ್ಯಾಂಡ್‍ಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಮಹಾನಗರ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಬೆಂಗಳೂರನ್ನು ಡಬ್ಲ್ಯೂಟಿಐನ ಮೊದಲ ಆವೃತ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಬ್ದುಲ್ ರಶೀದ್ ತಿಳಿಸಿದರು.
ಫೆಡರೇಷನ್ ಆಫ್ ಇಂಡಸ್ಟ್ರೀಸ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್‍ನ ರಾಷ್ಟ್ರೀಯ ಉಪಾಧ್ಯಕ್ಷ ಡಾ.ವೆಂಪಲ್ಲಿ ಅಮಾನುಲ್ಲಾ ಮಾತನಾಡಿ, ಜವಳಿ ಮತ್ತು ಉಡುಪು ಕ್ಷೇತ್ರದ ಸಂಪೂರ್ಣ ಮೌಲ್ಯ ಸರಪಳಿಯಲ್ಲಿನ ಅವಕಾಶಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ. ಭಾಗವಹಿಸುವ ಉದ್ಯಮಗಳಿಗೆ ನೆಟ್ವರ್ಕಿಂಗ್, ಮಾರುಕಟ್ಟೆ ಪ್ರವೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪರಿಚಯ ಮತ್ತು ಅವಕಾಶಗಳನ್ನು ಒದಗಿಸಲಾಗುತ್ತದೆ. ಡಬ್ಲ್ಯೂಟಿಐನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಅಂತಾರಾಷ್ಟ್ರೀಯ ಫ್ಯಾಷನ್ ಶೋನಲ್ಲಿ 5 ಲಕ್ಷ ರೂ. ಪ್ರಥಮ ಬಹುಮಾನದ ಜೊತೆಗೆ ಅಂತಾರಾಷ್ಟ್ರೀಯ ಬೆಸ್ಟ್ ಡಿಸೈನರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫೆಡರೇಷನ್ ಆಫ್ ಇಂಡಸ್ಟ್ರೀಸ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್‍ನ ರಾಷ್ಟ್ರೀಯ ನಿರ್ದೇಶಕ ಡಾ.ಸಾಂಬ ಶಿವ, ವಿಭಾಗೀಯ ಅಧ್ಯಕ್ಷ ಅರವಿಂದ್ ಗೋವಿಂದಪ್ಪ, ಪ್ರಾದೇಶಿಕ ಅಧ್ಯಕ್ಷ ಎಂ. ಜಯಶಂಕರ್, ನವೀನ್ ಕುಮಾರ್, ಹಾಗೂ ಮಂಜುನಾಥ್ ಆಚಾರ್ಯ ಉಪಸ್ಥಿತರಿದ್ದರು.






