ಗ್ಯಾರೆಂಟಿ ಯೋಜನೆಗಳಿಗೆ ಎಸ್‍ಸಿಪಿ-ಟಿಎಸ್‍ಪಿ ಅನುದಾನ ಬಳಕೆ ನಿಜ: ಕೆ.ಎಚ್.ಮುನಿಯಪ್ಪ

ಬೆಂಗಳೂರು : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್‍ಟಿಪಿ-ಟಿಎಸ್‍ಪಿ ಅನುದಾನವನ್ನು ಬಳಕೆ ಮಾಡಿಕೊಂಡಿರುವುದು ನಿಜ. ಇದನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಂಡರೂ, ವಾಸ್ತವ ಸಂಗತಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2026-27ನೇ ಸಾಲಿಗೆ ಎಸ್‍ಸಿಪಿ-ಟಿಎಸ್‍ಪಿರಡಿ ಒದಗಿಸಿದ ಅನುದಾನಕ್ಕೆ ವಿವಿಧ ಅಭಿವೃದ್ದಿ ಇಲಾಖೆಗಳು ತಯಾರಿಸಿದ ಕ್ರಿಯಾ ಯೋಜನೆ ಕುರಿತು ಈಗಾಗಲೇ ನೋಡಲ್ ಏಜೆನ್ಸಿ ಸಭೆ ನಡೆಸಲಾಗಿದೆ. 2025-26ನೇ ಸಾಲಿಗೆ ಸರಕಾರದಿಂದ ಎಸ್‍ಸಿಎಸ್‍ಪಿರಡಿ 30,649 ಕೋಟಿ ರೂ, ಟಿಎಸ್‍ಪಿರಡಿ 11,854 ಕೋಟಿ ಸೇರಿದಂತೆ 42,503 ಕೋಟಿ ರೂ.,ಗಳನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಎಸ್‍ಸಿಎಸ್‍ಪಿ ರಡಿ 28,630 ಕೋಟಿ, ರೂ., ಟಿಎಸ್‍ಪಿರಡಿ 10,927 ಕೋಟಿ ರೂ., ಒಟ್ಟು 39,557 ಕೋಟಿ ರೂ., ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಕೆಲ ಇಲಾಖೆಗಳಲ್ಲಿ ಅನುದಾನ ಬಿಡುಗಡೆ ಆಗಿದ್ದರೂ 104.56 ಕೋಟಿ ರೂ.,ಗಳನ್ನು ವೆಚ್ಚ ಮಾಡಿಲ್ಲ. ಬಿಡುಗಡೆ ಮಾಡಿದ ಅನುದಾನ ವನ್ನು ಅಧಿಕಾರಿಗಳು ಶೇ.100 ವೆಚ್ಚ ಮಾಡಬೇಕಾಗಿತ್ತು. ಆದರೆ, ಈಗ ಕಾಯ್ದೆಯಂತೆ ಈ ಅನುದಾನ 2027-28 ನೇ ಸಾಲಿಗೆ ಮರು ಹಂಚಿಕೆ ಮಾಡಲಾಗುತ್ತದೆ. ಮತ್ತೊಂದೆಡೆ, ವಿವಿಧ ಇಲಾಖೆಗಳಲ್ಲಿ ಮುಖ್ಯವಾಗಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ 2,841 ಕೋಟಿ ರೂ, ಬಿಡುಗಡೆಯಾಗಿಲ್ಲ ಎಂದೂ ಅವರು ಹೇಳಿದರು.




