ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ಪಣ : ಕೆ.ಎಚ್.ಮುನಿಯಪ್ಪ

ಬೆಂಗಳೂರು : ಕರ್ನಾಟಕ ರಾಜ್ಯವನ್ನು ಭಿಕ್ಷಾಟನೆ ಮುಕ್ತವಾಗಿ ಮಾಡಲು ಪಣ ತೊಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಕೇಂದ್ರ ಪರಿಹಾರ ಸಮಿತಿ ಹೊರತಂದಿರುವ ನೂತನ ವೆಬ್‍ಸೈಟ್ ಅನಾವರಣ ಗೊಳಿಸಿ ಮಾತನಾಡಿದ ಅವರು, ಸಮಾಜದಲ್ಲಿ ಭಿಕ್ಷಾಟನೆ ತಡೆಯುವುದು ಈ ವೆಬ್‍ಸೈಟ್ ಉದ್ದೇಶವಾಗಿದೆ. ರಾಜ್ಯದಲ್ಲಿ ನಾಲ್ಕು ಸಾವಿರ ಭಿಕ್ಷಾಟನೆ ಮಾಡುವವರಿದ್ದಾರೆ. ಬೆಂಗಳೂರಿನಲ್ಲಿ ಸಾವಿರ ಜನ ಭಿಕ್ಷಾಟನೆ ಮಾಡುತ್ತಿರುವ ಮಾಹಿತಿ ಇದೆ. ಹೀಗಾಗಿ, ಹೊಸ ಕ್ರಮಗಳ ಮೂಲಕ ರಾಜ್ಯವನ್ನು ಭಿಕ್ಷಾಟನೆ ಮುಕ್ತಗೊಳಿಸಲಾಗುವುದು ಎಂದರು.
ಭಿಕ್ಷಾಟನೆ ಇದ್ದರೆ ಇಡೀ ದೇಶವೇ ತಲೆತಗ್ಗಿಸಬೇಕಾಗುತ್ತೆ. ಭಿಕ್ಷಾಟನೆ ಮಾಡದಂತೆ ಮನಸ್ಸು ಪರಿವರ್ತಿಸಬೇಕಾಗುತ್ತೆ. ಭಿಕ್ಷಾಟನೆ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದೇವೆ. ಸಮಾಜದಲ್ಲಿ ಬೆರೆತು ಜೀವನ ಮಾಡುವಂತಾಗಬೇಕು. ಹೊಸ ವಾತಾವರಣ ನಿರ್ಮಿಸಬೇಕಿದೆ ಎಂದೂ ಸಚಿವರು ಹೇಳಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಆಗಾ ಸುಲ್ತಾನ್ ಮಾತನಾಡಿ, ಈ ವೆಬ್ ಸೈಟ್ ಮೂಲಕ ನಿರಾಶ್ರಿತ ಪರಿಹಾರ ಕೇಂದ್ರಗಳ ಕುರಿತ ಸಮಗ್ರ ಮಾಹಿತಿಯನ್ನು ಸಾರ್ವಜನಿಕರು ಮತ್ತು ವಿವಿಧ ಹಿತಾಸಕ್ತಿದಾರರಿಗೆ ಮಾಹಿತಿಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ರಾಜ್ಯದಲ್ಲಿ ಭಿಕ್ಷಾಟನೆ ಯನ್ನು ತಡೆಯಲು ಕ್ರಮ ವಹಿಸಲಾಗುತ್ತಿದೆ ಎಂದರು.
ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ಜಾರಿಯಲ್ಲಿದ್ದು, ರಾಜ್ಯಾದ್ಯಂತ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಭಿಕ್ಷೇ ನೀಡುವುದರ ಮೂಲಕ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬೇಡಿ. ಭಿಕ್ಷಾಟನೆಯು ಒಂದು ಸಾಮಾಜಿಕ ಪಿಡುಗಾಗಿದ್ದು, ಭಿಕ್ಷಾಟನೆ ನಿರ್ಮೂಲನೆಗಾಗಿ ಎಲ್ಲರೂ ಪ್ರಯತ್ನಿಸೋಣ ಎಂದು ಅವರು ಕರೆ ನೀಡಿದರು.






