ಬೆಂಗಳೂರು: ಹಣಕ್ಕಾಗಿ ಅಪಹರಣ; 13 ವರ್ಷದ ಬಾಲಕನ ಮೃತದೇಹ ಪತ್ತೆ

ಬೆಂಗಳೂರು: ಬುಧವಾರ ಹಣಕ್ಕಾಗಿ ಅಪಹರಿಸಲ್ಪಟ್ಟ 13 ವರ್ಷದ ಬಾಲಕನ ದೇಹ ಅರೆಸುಟ್ಟ ಸ್ಥಿತಿಯಲ್ಲಿ ಕಗ್ಗಲೀಪುರದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.
ಕ್ರೈಸ್ಟ್ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದ ನಿಶ್ಚಿತ್ ಸಾವಿಗೀಡಾದ ಬಾಲಕ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಟ್ಯೂಷನ್ ಮುಗಿಸಿ ವಾಪಸ್ಸಾಗುತ್ತಿದ್ದ ನಿಶ್ಚಿತ್ ಅರಕೆರೆ 80 ಅಡಿ ರಸ್ತೆಯಿಂದ ನಾಪತ್ತೆಯಾಗಿದ್ದ. ಈತನ ತಂದೆ ಜೆ.ಸಿ.ಅಚ್ಯುತ್ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಸಂಜೆ 7.30ರವರೆಗೂ ಮಗ ಬಾರದೇ ಇದ್ದಾಗ ತಾಯಿ ಟ್ಯೂಷನ್ ಶಿಕ್ಷಕರಿಗೆ ದೂರವಾಣಿ ಕರೆ ಮಾಡಿದ್ದರು. ನಿಗದಿತ ಸಮಯಕ್ಕೆ ಬಾಲಕ ತೆರಳಿದ್ದಾಗಿ ಉತ್ತರ ಬಂದ ಬಳಿಕ ಅಚ್ಯುತ್ ಪೊಲೀಸರಿಗೆ ದೂರು ನೀಡಿದ್ದರು. ಬಾಲಕನ ಹುಡುಕಾಟ ನಡೆಸಿದಾಗ ಅರಕೆರೆ ಫ್ಯಾಮಿಲಿ ಪಾರ್ಕ್ ಬಳಿ ಆತನ ಸೈಕಲ್ ಪತ್ತೆಯಾಗಿತ್ತು.
ಬಾಲಕನ ಬಿಡುಗಡೆಗಾಗಿ 5 ಲಕ್ಷ ರೂಪಾಯಿ ನೀಡುವಂತೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹುಳಿಮಾವು ಠಾಣೆಯಲ್ಲಿ ನಾಪತ್ತೆ ಮತ್ತು ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸ್ ತಂಡ ಗುರುವಾರ ಹುಡುಕಾಟ ನಡೆಸಿದ್ದು, ಆರೋಪಿಗಳ ಫೋನ್ ನ ಲೊಕೇಶನ್ ಕಂಡು ಹಿಡಿಯುವ ಪ್ರಯತ್ನ ಮಾಡಿದ್ದರು. ಏತನ್ಮಧ್ಯೆ ಗುರುವಾರ ಬಾಲಕನ ಶವ ಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.





