ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ‘ಕಿಯೋ ಪರ್ಸನಲ್ ಕಂಪ್ಯೂಟರ್’ ಆಕರ್ಷಣೆ!

ಬೆಂಗಳೂರು : ಕಂಪ್ಯೂಟರ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಬಲ್ಲ ಎಐ ಶಕ್ತ ಕಂಪ್ಯೂಟರ್ ವೊಂದನ್ನು ಕರ್ನಾಟಕ ಸರಕಾರವು ಅಭಿವೃದ್ಧಿಪಡಿಸಿದ್ದು, ಅಗ್ಗದ ಬೆಲೆಗೆ ಸಿಗುವ ಈ ‘ಕಿಯೋ ಪರ್ಸನಲ್ ಕಂಪ್ಯೂಟರ್’ ಮಂಗಳವಾರ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ‘ಬೆಂಗಳೂರು ಟೆಕ್ ಶೃಂಗಸಭೆ-2025’ರಲ್ಲಿ ಪ್ರಮುಖ ಆಕರ್ಷಣೆ ಎನಿಸಿದೆ.
ಈ ಸಂಬಂಧ ‘ಕಿಯೋ ಪರ್ಸನಲ್ ಕಂಪ್ಯೂಟರ್’ ಲೋಕಾರ್ಪಣೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ಹಾಗೂ ಕಿಯೋನಿಕ್ಸ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕಿಯೋ ಪರ್ಸನಲ್ ಕಂಪ್ಯೂಟರ್‌ಗೆ ಕೇವಲ 18,999 ರೂ. ಬೆಲೆ ನಿಗದಿ ಪಡಿಸಲಾಗಿದೆ. ಇದು ರಾಜ್ಯಾದ್ಯಂತ ನಾಗರಿಕರ ಡಿಜಿಟಲ್ ಸಬಲೀಕರಣಕ್ಕೆ ನೆರವಾಗಲಿದೆ ಎಂದರು.
ಸದ್ಯ ಜಾಗತಿಕವಾಗಿ ರೇರ್ ಆರ್ಥ್ ಮೆಟಿರಿಯಲ್‍ನ ಪೂರೈಕೆಯಲ್ಲಿ ಗೊಂದಲಗಳಿವೆ. ಈ ಸಮಸ್ಯೆ ಪರಿಹಾರಗೊಂಡು ಸರಾಗವಾಗಿ ರೇರ್ ಆರ್ಥ್ ಮೆಟಿರಿಯಲ್ ಪೂರೈಕೆಯಾಗಲು ಆರಂಭಗೊಂಡರೆ ‘ಕಿಯೋ’ದ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
‘ಕಿಯೋ’ಕ್ಕೆ ಈಗಾಗಲೇ 500 ಪ್ರಿ ಆರ್ಡರ್ ಬಂದಿತ್ತು. ಇದೀಗ ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರುವ ಕ್ರಿಸ್ ಗೋಪಾಲಕೃಷ್ಣನ್ ಸರಕಾರಿ ಶಾಲೆಗಳಿಗೆ ನೀಡಲು 1,000 ‘ಕಿಯೋ’ಕ್ಕೆ ಪ್ರಿ ಬುಕ್ಕಿಂಗ್ ಮಾಡಿದ್ದಾರೆ. ಕಿಯೋ ಕಂಪ್ಯೂಟರ್ ಖರೀದಿಯ ಮುಂಗಡ ಆರ್ಡರ್ www.koonest.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಮಾಡಬಹುದು. ಬುಕ್ ಮಾಡಿದ ಎರಡು ತಿಂಗಳೊಳಗೆ ಕಿಯೋವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಮೈಸೂರಿನಲ್ಲಿ ಕಿಯೋದ ಉತ್ಪಾದನಾ ಘಟಕ ಆರಂಭಿಸಲು ಚಿಂತನೆ ನಡೆಸಿದ್ದೇವೆ, ಅತೀ ಶೀಘ್ರದಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು.
ಏನಿದು ಕಿಯೋ ಕಂಪ್ಯೂಟರ್?:
ಕಿಯೋ(ಕೆಇಒ) ಎಂಬುದು ಒಂದು ಸಣ್ಣ ಪರ್ಸನಲ್ ಕಂಪ್ಯೂಟರ್ ಅಥವಾ ಪಿಸಿ. ಇದು ಜ್ಞಾನ ಆಧಾರಿತವಾದ, ಮಿತವ್ಯಯ ಮತ್ತು ಮುಕ್ತ-ಕಂಪ್ಯೂಟಿಂಗ್ ಇರುವ ಕಂಪ್ಯೂಟರ್. ಇದು ವಿದ್ಯಾರ್ಥಿ ಸಮುದಾಯದ ಕಲಿಕೆಗೆ ನೆರವಾಗಲಿದೆ. ದುಬಾರಿ ಬೆಲೆಯ ಕಂಪ್ಯೂಟರ್, ಲ್ಯಾಪ್‍ಟಾಪ್ ಖರೀದಿಸಲು ಶಕ್ತರಲ್ಲದ ಕೆಳ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಪ್ರಬಲ ಕಂಪ್ಯೂಟರ್ ಒದಗಿಸುವ ಉದ್ದೇಶದಿಂದ ರೂಪಿಸಲಾದ ಪಿಸಿ ಇದು.
ಕಿಯೋ ಪಿಸಿಯಲ್ಲಿ ಏನಿದೆ ವಿಶೇಷತೆ?:
ಇದು ಕೃತಕ ಬುದ್ಧಿಮತ್ತೆಯ ಪರ್ಸನಲ್ ಕಂಪ್ಯೂಟರ್ ಆಗಿದೆ. 4ಜಿ ವೈ-ಫೈ, ಈಧರ್ನೆಟ್, ಯುಎಸ್‍ಬಿ ಎ, ಯುಎಸ್‍ಬಿ-ಸಿ ಪೋರ್ಟ್‍ಗಳು, ಎಚ್‍ಡಿಎಂಐ, ಆಡಿಯೋ ಪ್ಯಾಕ್ ಸೌಲಭ್ಯಗಳನ್ನು ಇದು ಹೊಂದಿದೆ. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಬಲ್ಲಂತೆ ಎಐ ಅನ್ನು ಶಕ್ತಗೊಳಿಸಲಾಗಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳನ್ನು ಪ್ರೀ ಇನ್‍ಸ್ಟಾಲ್ ಮಾಡಲಾಗಿದೆ. ಇದು ಅನ್-ಡಿವೈಸ್ ಎಐ ಕೋರ್ ಒಳಗೊಂಡಿದೆ.
ಈ ಕಂಪ್ಯೂಟರ್‌ನಲ್ಲಿ ಮತ್ತೊಂದು ವಿಶೇಷತೆ ಎಂದರೆ ‘ಬುದ್ಧ’ ಎನ್ನುವ ಎಐ ಏಜೆಂಟ್. ಕರ್ನಾಟಕ ರಾಜ್ಯದ ಡಿಎಸ್‍ಇಆರ್‌ಟಿ ಪಠ್ಯಕ್ರಮದಲ್ಲಿ ತರಬೇತಿ ಪಡೆದ ಎಐ ಏಜೆಂಟ್ ಇದು. ಕಿಯೋ ಕಂಪ್ಯೂಟರ್ ನಲ್ಲಿ ಈ ಎಐ ಏಜೆಂಟ್ ಪ್ರೀಲೋಡೆಡ್ ಆಗಿ ಬಂದಿರುತ್ತದೆ. ಇದು ಕಡಿಮೆ ಸಂಪರ್ಕ ಹೊಂದಿರುವ ಅಥವಾ ಇಂಟರ್ನೆಟ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ಆಫ್‍ಲೈನ್‍ನಲ್ಲೇ ಈ ಎಐ ಏಜೆಂಟ್ ಕೆಲಸ ಮಾಡಬಲ್ಲದು.
ಸರಕಾರದ ಧ್ಯೇಯ ಸಾಕಾರಗೊಳಿಸಲು ‘ಕಿಯೋ’ ನೆರವು..!
ಶಾಲೆಗಳು, ವಿಶ್ವವಿದ್ಯಾಲಯಗಳು, ಸಣ್ಣ ಉದ್ದಿಮೆಗಳು, ಸರಕಾರಿ ಕಚೇರಿಗಳು ಮತ್ತು ಮನೆಗಳಲ್ಲಿ ಕಿಯೋ ಕಂಪ್ಯೂಟರ್ ಬಳಕೆಯಾಗಲಿದೆ. ಡಿಜಿಟಲಾ ಕಲಿಕೆ. ಕೌಶಲ ಮತ್ತು ಉದ್ಯಮಶೀಲತೆಗೆ ಇದು ಹೊಸ ಮಾರ್ಗಗಳನ್ನು ಸೃಷ್ಟಿಸಲಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಕೇಂದ್ರೀಕೃಪ ತಂತ್ರಜ್ಞಾನದ ಬೆಳವಣಿಗೆ ಸಾಧಿಸುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಡಿಜಿಟಲ್ ಅವಕಾಶವನ್ನು ಖಚಿತಪಡಿಸಿಕೊಳ್ಳುವ ರಾಜ್ಯ ಸರಕಾರದ ಧ್ಯೇಯವನ್ನು ಸಾಕಾರಗೊಳಿಸಲು ನೆರವಾಗಲಿದೆ.
-ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ.







