ಪ್ರವಾಸೋದ್ಯಮದ ಅಭಿವೃದ್ದಿ ಹಾಗೂ ಹೊಸ ಸಾಧ್ಯತೆಗಳ ಆವಿಷ್ಕಾರಕ್ಕೆ ನೀತಿ: ಕೆ.ಜೆ.ಜಾರ್ಜ್

ಬೆಂಗಳೂರು : ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ತಂತ್ರಜ್ಞಾನ, ಉತ್ಪನ್ನಗಳು ಮತ್ತು ನವೀನ ಪರಿಹಾರಗಳನ್ನು ರೂಪಿಸಲು ಸ್ಟಾರ್ಟ್ ಅಪ್‍ಗಳ ಸಾಮಥ್ರ್ಯವನ್ನು ಬಳಸಿಕೊಳ್ಳುವ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆಯು ‘ಪ್ರವಾಸೋದ್ಯಮ ಸ್ಟಾರ್ಟ್ ಅಪ್ ಪ್ರೋತ್ಸಾಹ ನೀತಿ’ ರೂಪಿಸಲಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರದ ನೈಜ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸ್ಟಾರ್ಟ್ ಅಪ್‍ಗಳು, ಯುವ ಉದ್ಯಮಿಗಳು ಮತ್ತು ನವೋದ್ಯಮಿಗಳಿಗೆ ಅವಕಾಶ ಕಲ್ಪಿಸುವುದು ಉದ್ದೇಶಿತ ನೀತಿಯ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಪ್ರವಾಸಿಗರ ಅನುಭವ, ಡಿಜಿಟಲ್ ಸೇವೆಗಳು, ಪ್ರವಾಸಿ ತಾಣಗಳ ನಿರ್ವಹಣೆ, ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ, ಸಂಚಾರ, ಸುರಕ್ಷತೆ, ಪ್ರವೇಶಸೌಲಭ್ಯ, ಪ್ರವಾಸಿ ಮಾಹಿತಿ ಹಾಗೂ ಸ್ಥಳೀಯ ಅನುಭವಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಪರಿಹಾರಗಳನ್ನು ರೂಪಿಸಲು ನೀತಿಯಡಿ ಅವಕಾಶ ಕಲ್ಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಜಾರ್ಜ್ ತಿಳಿಸಿದರು.
ಕರ್ನಾಟಕವು ದೇಶದ ಪ್ರಮುಖ ಸ್ಟಾರ್ಟ್ ಅಪ್ ಕೇಂದ್ರವಾಗಿದೆ. ಈ ನಾವಿನ್ಯತೆಯ ಶಕ್ತಿಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಬೇಕು. ಪ್ರವಾಸೋದ್ಯಮ ಇಲಾಖೆಯ ಅಗತ್ಯಗಳು ಮತ್ತು ಸವಾಲುಗಳನ್ನು ಸ್ಟಾರ್ಟ್ ಅಪ್‍ಗಳ ಮುಂದೆ ಇಟ್ಟು, ಅವರು ಹೊಸ ಪರಿಹಾರ, ಉತ್ಪನ್ನ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡುವುದು ನಮ್ಮ ಉದ್ದೇಶ. ಉತ್ತಮ ಆಲೋಚನೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿ, ಫಲಿತಾಂಶ ನೀಡುವ ಪರಿಹಾರಗಳನ್ನು ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಬಳಸಿಕೊಳ್ಳುವಂತಹ ವಾತಾವರಣವನ್ನು ರೂಪಿಸಲು ಈ ನೀತಿ ನೆರವಾಗಲಿದೆ ಎಂದು ಜಾರ್ಜ್ ಹೇಳಿದರು.
ಪ್ರವಾಸೋದ್ಯಮದ ಅಭಿವೃದ್ಧಿ ಎಂದರೆ ಕೇವಲ ಹೊಸ ತಾಣಗಳು ಅಥವಾ ಮೂಲಸೌಕರ್ಯ ನಿರ್ಮಾಣವಲ್ಲ. ಪ್ರವಾಸಿಗರ ಪ್ರಯಾಣವನ್ನು ಸುಲಭ, ಸುರಕ್ಷಿತ ಮತ್ತು ಸ್ಮರಣೀಯವಾಗಿಸುವ ಹೊಸ ಪರಿಹಾರಗಳೂ ಅಗತ್ಯ. ಸ್ಟಾರ್ಟ್ ಅಪ್‍ಗಳಿಗೆ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರವೇ ಹೊಸ ಆವಿಷ್ಕಾ ರಗಳನ್ನು ಅಭಿವೃದ್ಧಿಪಡಿಸಿ ಪರೀಕ್ಷಿಸುವ ವೇದಿಕೆಯಾಗಬೇಕು ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಉದ್ದೇಶಿತ ನೀತಿಯಡಿ ಪ್ರವಾಸೋದ್ಯಮ ಕ್ಷೇತ್ರದ ನಿರ್ದಿಷ್ಟ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಗುರುತಿಸಿ, ಅವುಗಳಿಗೆ ಸ್ಟಾರ್ಟ್ ಅಪ್‍ಗಳಿಂದ ಪರಿಹಾರಗಳನ್ನು ಆಹ್ವಾನಿಸುವ ವ್ಯವಸ್ಥೆ ರೂಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಆಯ್ದ ಪರಿಹಾರಗಳನ್ನು ನಿರ್ದಿಷ್ಟ ಪ್ರವಾಸಿ ತಾಣಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ, ಅವುಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಮೂಲಕ ಯಶಸ್ವಿ ಮಾದರಿಗಳನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬಹುದು. ಇದರಿಂದ ಸ್ಟಾರ್ಟ್ ಅಪ್‍ಗಳಿಗೆ ನೈಜ ಮಾರುಕಟ್ಟೆ ಮತ್ತು ಪರೀಕ್ಷಾ ವೇದಿಕೆ ದೊರೆಯುವುದರ ಜೊತೆಗೆ ಪ್ರವಾಸೋದ್ಯಮ ಇಲಾಖೆಗೆ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾ ರಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.






