ಕೃಷಿ ಪಂಪ್‍ಸೆಟ್‍ಗಳಿಗೆ 7 ಗಂಟೆ ವಿದ್ಯುತ್ ಪೂರೈಕೆ: ಕೆ.ಜೆ.ಜಾರ್ಜ್

ಬೆಂಗಳೂರು : ರಾಜ್ಯದ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನ ವೇಳೆಯೇ ನಿರಂತರ 7 ಗಂಟೆಗಳ ಕಾಲ ವಿದ್ಯುತ್‍ನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಸಿ.ಬಿ.ಸುರೇಶ್‍ಬಾಬು ಪ್ರಶ್ನೆಗೆ ಉತ್ತರಿಸಿದ ಅವರು, ತಾಂತ್ರಿಕ ಸಾಧ್ಯತೆ ಇರುವ ಉಪಕೇಂದ್ರಗಳಿಂದ ನಿರಂತರ 7 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು. ತಾಂತ್ರಿಕ ಸಾಧ್ಯತೆ ಇಲ್ಲದಿರುವ ಉಪಕೇಂದ್ರಗಳಲ್ಲಿ ಪಾಳಿಯಲ್ಲಿ ಹಗಲಿನ ವೇಳೆ 4 ಗಂಟೆ ರಾತ್ರಿ ವೇಳೆ 3 ಗಂಟೆ ಒಟ್ಟು 7 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್‍ನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.
ಅಂತರ್ಜಲ ಕುಸಿತದ ಕಾರಣಗಳನ್ನು ಉಲ್ಲೇಖಿಸಿ ತ್ರಿಫೇಸ್ ವಿದ್ಯುತ್ ಸರಬರಾಜಿನ ಬ್ಯಾಚ್‍ಗಳನ್ನು ಸಮಯ ಬದಲಾಯಿಸಲು ಯಾವುದೇ ಕೋರಿಕೆ ಬಂದಿಲ್ಲ. ಈ ರೀತಿಯ ಸಮಯ ಬದಲಾವಣೆಯೂ ಸಾಧ್ಯವೇ ಇಲ್ಲ ಎಂದ ಅವರು, 48 ಗಂಟೆಗಳಲ್ಲಿ ಟಿಸಿ ಬದಲಾವಣೆ ರಾಜ್ಯದ ಯಾವುದೇ ಕಡೆ ವಿದ್ಯುತ್ ಪರಿವರ್ತಕಗಳು (ಟಿಸಿ) ಸುಟ್ಟು ಹೋದ ಸಂದರ್ಭದಲ್ಲಿ ಅದನ್ನು 48 ಗಂಟೆಗಳಲ್ಲಿ ಬದಲಿಸಬೇಕು. ಒಂದು ವೇಳೆ ಈ ಅವಧಿಯಲ್ಲಿ ಟಿಸಿ ಬದಲಾವಣೆ ಮಾಡದೆ ಹೋದರೆ ಅಲ್ಲಿನ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸದನಕ್ಕೆ ಹೇಳಿದರು.







