ಜಿಬಿಎ ನಡೆಸುತ್ತಿರುವ ‘ಕ್ಲೀನ್ ಅಪ್ ಬೆಂಗಳೂರು’ ಅಭಿಯಾನಕ್ಕೆ ಬೆಸ್ಕಾಂ ಸಾಥ್

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಯೋಜಿಸಿರುವ ಒಂದು ತಿಂಗಳ ಅವಧಿಯ ‘ಕ್ಲೀನ್ ಅಪ್ ಬೆಂಗಳೂರು’ ಅಭಿಯಾನದಲ್ಲಿ ಬೆಸ್ಕಾಂ ಕೈಜೊಡಿಸಿದ್ದು, ಪರಿವರ್ಕತಗಳ ಸ್ಥಳಾಂತರದಿಂದ ‘ಸುರಕ್ಷಿತ ನಡಿಗೆ’ಯ ಗ್ಯಾರಂಟಿ ನೀಡಲಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಜಿಬಿಎ ಘೋಷಿಸಿರುವ ಒಂದು ತಿಂಗಳ ‘ಕ್ಲೀನ್ ಅಪ್ ಬೆಂಗಳೂರು’ ಅಭಿಯಾನದಲ್ಲಿ ಕೈಜೋಡಿಸಿರುವ ಬೆಸ್ಕಾಂ ಶನಿವಾರ ಹಮ್ಮಿಕೊಂಡಿದ್ದ ಪಾದಾಚಾರಿ ಮಾರ್ಗಗಳಲ್ಲಿರುವ ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ವೀಕ್ಷಿಸಿದ ಅವರು, ಈ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಣ್ಣೂರು ಮುಖ್ಯ ರಸ್ತೆ ಸಮೀಪದ ಚನ್ನಕೇಶವ ಬಡಾವಣೆಯ ಪಾದಚಾರಿ ಮಾರ್ಗದಲ್ಲಿದ್ದ ವಿದ್ಯುತ್ ಪರಿವರ್ತಕ(ಟ್ರಾನ್ಸ್‍ಫಾರ್ಮರ್) ಸ್ಥಳಾಂತರ ಕಾರ್ಯವನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ಅವರೊಂದಿಗೆ ಪರಿಶೀಲನೆ ನಡೆಸಿದ ಜಾರ್ಜ್, ಸಾರ್ವಜನಿಕರಿಗೆ ಸುರಕ್ಷಿತ ಪಾದಚಾರಿ ಮಾರ್ಗ ಕಲ್ಪಿಸಲು ಆದ್ಯತೆ ಮೇರೆಗೆ ಕೆಲಸ ನಿರ್ವಹಿಸಲು ಸೂಚನೆ ನೀಡಿದರು.
ನಾಗರಿಕ ಸ್ನೇಹಿಯಾಗಿರುವ ಬೆಸ್ಕಾಂ ಜಿಬಿಎ ಜತೆಗೆ ಕ್ಲೀನ್‍ಅಪ್ ಬೆಂಗಳೂರು ಅಭಿಯಾನದಲ್ಲಿ ಭಾಗಿಯಾಗಿದೆ. ನಗರದ ಜನತೆಗೆ ಸುರಕ್ಷಿತ ಪಾದಚಾರಿ ಮಾರ್ಗ ಕಲ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಅಭಿವೃದ್ದಿಗೆ ವಿದ್ಯುತ್ ಮೂಲಸೌಕರ್ಯ ಅಳವಡಿಕೆ ಅವಶ್ಯಕ. ಹೀಗಿದ್ದರೂ ಪಾದಚಾರಿಗಳಿಗೆ ತೊದರೆಯಾಗದಂತೆ ಕೆಲವೆಡೆ ಪಾದಚಾರಿ ಮಾರ್ಗಗಳಲ್ಲಿ ಇರುವ ವಿದ್ಯುತ್ ಪರಿವರ್ತಕಗಳನ್ನು ಕೂಡಲೇ ಸ್ಥಳಾಂತರಿಸುವ ಕೆಲಸಕ್ಕೆ ಬೆಸ್ಕಾಂ ಮುಂದಾಗಿದೆ ಎಂದು ಅವರು ಹೇಳಿದರು.
ಇನ್ನೊಂದು ತಿಂಗಳಲ್ಲಿ ನಾವು ಜನತೆಗೆ ಸುರಕ್ಷಿತ ಪಾದಚಾರಿ ಮಾರ್ಗ ಹಾಗೂ ಕಸಮುಕ್ತ ವಾತಾವರಣ ನಿರ್ಮಿಸಿಕೊಡಲಿದ್ದೇವೆ. ಬೆಸ್ಕಾಂ ವಿಶೇಷವಾಗಿ ಅಭಿಯಾನದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ ಎಂದು ಜಾರ್ಜ್ ತಿಳಿಸಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ಮಾತನಾಡಿ, ಪಾದಚಾರಿ ಮಾರ್ಗಗಳಲ್ಲಿರುವ ಅನುಪಯುಕ್ತ ಹಾಗೂ ನಿಷ್ಕ್ರಿಯಗೊಂಡ ವಿದ್ಯುತ್ ಮೂಲ ಸೌಕರ್ಯಗಳನ್ನು ತೆರವುಗೊಳಿಸಲಾಗುವುದು. ಮುರಿದಿರುವ, ಹಾನಿಗೊಳಗಾಗಿರುವ ಮತ್ತು ಸವಕಳಿಯಾಗಿರುವ ವಿದ್ಯುತ್ ಕಂಬಗಳನ್ನು ಉಗ್ರಾಣಗಳಿಗೆ ಹಿಂತಿರುಗಿಸಲು ಅಥವಾ ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದರು.
ಪರಿಶೀಲನೆ ವೇಳೆ ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಪುಲಕೇಶಿ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಬೆಸ್ಕಾಂನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






