‘ಮಹದಾಯಿ’ ನದಿ ನೀರಿನ ಹಂಚಿಕೆ ಅನ್ಯಾಯ ಖಂಡಿಸಿ ಜು.21ಕ್ಕೆ ಪಾದಯಾತ್ರೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು, : ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ಮತ್ತು ಮಹದಾಯಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಜು.21ರಂದು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಮಹದಾಯಿ ನ್ಯಾಯಮಂಡಳಿ ನೀಡಿದ ಅಂತಿಮ ಆದೇಶದಲ್ಲಿ 13.42 ಟಿಎಂಸಿಯಲ್ಲಿ 3.8 ಟಿಎಂಸಿ ನೀರು ಮೂರು ಹಳ್ಳಗಳಿಂದ ಮಲಪ್ರಭೆಗೆ ಕೊಟ್ಟು ಉಳಿಕೆ ಮಹದಾಯಿ ನದಿ ನೀರಿನಿಂದ ಜಲ ವಿದ್ಯುತ್ ಉತ್ಪಾದನೆಗೆ ಆದೇಶ ನೀಡಿದೆ ಎಂದರು.
ಮಹದಾಯಿ ನದಿಯ ನೀರಿನ ವಿವಾದವನ್ನು ರಾಜಕೀಕರಣ ಮಾಡಿಕೊಂಡು ಎರಡು ರಾಷ್ಟ್ರೀಯ ಪಕ್ಷಗಳು ತನ್ನ ರಾಜಕೀಯ ಲಾಭಕೋಸ್ಕರ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ನಾಡಿನ ಜನರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ಇದನ್ನು ಖಂಡಿಸಿ ನಮ್ಮ ಒತ್ತಾಯಗಳನ್ನು ಈಡೇರಿಸಲು ದೊಡ್ಡ ಪ್ರಮಾಣದಲ್ಲಿ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮಗೆ ಮಾಲಾರ್ಪಣೆ ಮಾಡಿ, ರೈತ ಘೋಷಣೆಯೊಂದಿಗೆ ಪಾದಯಾತ್ರೆ ಪ್ರಾರಂಭಗೊಂಡು ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗೆ ತಲುಪುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಕೃಷ್ಣ ನದಿಯ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ರಿಂದ 524.25ಕ್ಕೆ ಎತ್ತರಗೊಳಿಸಿ ಹೆಚ್ಚಿನ ನೀರನ್ನು ರಾಜ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬೆಳೆ ವಿಮೆ ನೀಡದೆ ಇರುವ ರಾಜ್ಯ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಕೂಡಲೇ ಬೆಳೆ ವಿಮೆ ಕೊಡಿಸಬೇಕು. 2023ರ ರಾಜ್ಯದ ಸಂಪೂರ್ಣ ಬರಗಾಲದ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡಬೇಕು. ತುಂಗಭದ್ರ ಅಣೆಕಟ್ಟುನಲ್ಲಿ ಸುಮಾರು 33 ಟಿಎಂಸಿ ಯಷ್ಟು ಹೂಳು ತುಂಬಿರುವ ಕಾರಣಕ್ಕೆ, ನೀರು ಶೇಕರಣೆ ಮಾಡಲು ಸ್ಥಳಾವಕಾಶವಿಲ್ಲದೆ ಆಂಧ್ರಪ್ರದೇಶಕ್ಕೆ ಹರಿಬಿಡಲಾಗುತ್ತಿದೆ. ಸರಕಾರ ಈ ಕೂಡಲೇ ತುರ್ತು ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಸದಸ್ಯರಾದ ರಮೇಶ್, ಅರುಣ್ ಕುಮಾರ್, ಈರಣ್ಣ ಉಪಸ್ಥಿತರಿದ್ದರು.







