‘ಕೋಗಿಲು ಬಡಾವಣೆ’ ಹಣ ಪಡೆದು ಅನಧಿಕೃತವಾಗಿ ನಿವೇಶನ ಹಂಚಿದ ಆರೋಪ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC: freepik
ಬೆಂಗಳೂರು : ಕೋಗಿಲು ಬಡಾವಣೆಯ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ನಿವಾಸಿಗಳಿಂದ ಹಣ ಪಡೆದು ಅನಧಿಕೃತವಾಗಿ ನಿವೇಶನ ಹಂಚಿರುವ ಆರೋಪದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್(ಬಿಎಸ್ಡಬ್ಲ್ಯೂಎಂಎಲ್)ನ ಇಂಜಿನಿಯರ್ ಸಂತೋಷ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿಜಯ್ ಹಾಗೂ ವಾಸೀಂ ಬೇಗ್ ಎಂಬವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿರುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಾದ ರಾಬಿನ್ ಹಾಗೂ ಮುನಿ ಆಂಜಿನಪ್ಪ ಎಂಬವರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಕಾರಿ ಜಾಗವನ್ನು ಅತಿಕ್ರಮಣ ಮಾಡುವುದಲ್ಲದೆ ನಕಲಿ ದಾಖಲಾತಿ ಸೃಷ್ಟಿಸಿ ಜನರಿಗೆ ನಿವೇಶನಗಳನ್ನು ಹಂಚಿ ಆರೋಪಿಗಳು ಹಣ ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ನಿವೇಶನ ಕೊಡಿಸುವುದಾಗಿ ಹೇಳಿ ಅವರಿಂದ ಹಣ ಪಡೆದು ಸರಕಾರಿ ಜಾಗದಲ್ಲಿ ನಿವೇಶನ ನೀಡಿದ್ದರು. ಇದುವರೆಗೆ ಎಷ್ಟು ಮಂದಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ? ಇದರ ಹಿಂದೆ ಬೇರೆ ಯಾರಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಬಳಿಕ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಕೋಗಿಲು ಬಡಾವಣೆ ಬಳಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಡಿ.20ರಂದು ತೆರವುಗೊಳಿಸಲಾಗಿತ್ತು. ಪರಿಶೀಲನೆ ವೇಳೆ ಕೆಲವರು ಜಾಗ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ಮೋಸ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ನಿವೇಶನ ಹಂಚುವ ಸಂಬಂಧ ಕೆಲವು ಜನರಿಗೆ ಕೆಲ ದಾಖಲಾತಿ ನೀಡಿರುವ ಬಗ್ಗೆ ಮಾಹಿತಿ ಇದ್ದು, ಅದನ್ನು ಪರಿಶೀಲಿಸಲಾಗುತ್ತಿದೆ. ಹಣ ನೀಡಿ ವಂಚನೆಗೊಳಗಾದವರಿಗೆ ದೂರು ನೀಡುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.







