ಕೋರಮಂಗಲದ "ಪೆಪ್ಟೈಡ್ ಪಾರ್ಟಿ" ರದ್ದು: ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ

ಬೆಂಗಳೂರು : ಬೆಂಗಳೂರಿನ ಕೋರಮಂಗಲದಲ್ಲಿ ಆಗಸ್ಟ್ 29ರಂದು ನಡೆಯಬೇಕಿದ್ದ "ಪೆಪ್ಟೈಡ್ ಪಾರ್ಟಿ" (Peptide Party) ಕಾರ್ಯಕ್ರಮವನ್ನು ಆಯೋಜಕರು ತಮ್ಮ ಸ್ವಇಚ್ಛೆಯಿಂದ ಆಹಾರ ಸುರಕ್ಷತೆ ಮತ್ತು ಔಷಧಗಳ ಆಡಳಿತ ಇಲಾಖೆಗೆ ಪತ್ರ ಬರೆದು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.
ಸದರಿ ಪಾರ್ಟಿಯಲ್ಲಿ ಭಾಗವಹಿಸಲು ಹಲವಾರು ಜನರು ಈಗಾಗಲೇ ನೋಂದಾಯಿಸಿಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ಮತ್ತು ವಿತರಿಸಲು ಉದ್ದೇಶಿಸಲಾಗಿದ್ದ ಪೆಪ್ಟೈಡ್ ಉತ್ಪನ್ನಗಳ ಸುರಕ್ಷತೆ, ವೈದ್ಯಕೀಯ ಅರ್ಹತೆ, ನೈರ್ಮಲ್ಯ ಹಾಗೂ ಆಹಾರ ಪದಾರ್ಥಗಳ ಕುರಿತು ಇಲಾಖೆಯ ಮುಂದೆ ಖುದ್ದು ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಆಯೋಜಕರಾದ ಸಂಸ್ಥೆಗೆ ಸೂಚಿಸಲಾಗಿತ್ತು. ಆಯೋಜಕರು ಅಗತ್ಯ ದಾಖಲೆ ಹಾಗೂ ತೃಪ್ತಿಕರ ವಿವರಣೆ ನೀಡಲು ಕಾಲಾವಕಾಶ ನೀಡುವಂತೆ ವಿಚಾರಣೆ ವೇಳೆ ಕೋರಿದ್ದು, ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ನಿಗದಿಪಡಿಸಲಾಗಿದೆ.
ಪೆಪ್ಟೈಡ್‌ಗಳಂತಹ ಉತ್ಪನ್ನಗಳನ್ನು ಯಾವುದೇ ಸೂಕ್ತ ಪ್ರಾಧಿಕಾರಗಳ ( FDA/CDSCO / FSSAI) ಅನುಮತಿಯಿಲ್ಲದೆ ಸಾರ್ವಜನಿಕವಾಗಿ ಪ್ರಚಾರ ಮಾಡುವುದು ಅಥವಾ ವಿತರಿಸುವುದು ಕಾನೂನುಬಾಹಿರವಾಗಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಇಲಾಖೆಯು ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಸದರಿ ಕಾರ್ಯಕ್ರಮವನ್ನು ಆಯೋಜಕರೇ ರದ್ದುಗೊಳಿಸಿದ್ದು, ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ಆಯೋಜಕರೇ ಸ್ಥಗಿತಗೊಳಿಸಿದ್ದಾರೆ. ಸದರಿ ಕಾರ್ಯಕ್ರಮವು ನಿಯಮಬಾಹಿರವಾಗಿದ್ದು, ಇದನ್ನು ನಿಯಮ ಮೀರಿ ಆಯೋಜಿಸಿದಲ್ಲಿ ಆಯೋಜಕರು, ನಿರ್ವಾಹಕರು, ಸ್ಪಾನ್ಸರ್‌ಗಳು ಹಾಗೂ ಭಾಗವಹಿಸುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗುತ್ತಿದೆ.






