ಕೋರಮಂಗಲದಲ್ಲಿ ಸ್ವಂತ ಖರ್ಚಿನಲ್ಲಿ ಫುಟ್ಪಾತ್ ರಿಪೇರಿ ಮಾಡಿಸಿದ ಬೆಂಗಳೂರು ಕಂಪೆನಿಯೊಂದರ ಸಿಇಒ

ಬೆಂಗಳೂರು : ಬೆಂಗಳೂರಿನ ಕೋರಮಂಗಲದಲ್ಲಿ ವಷರ್ಗಳಿಂದ ಹಾಳಾಗಿದ್ದ ಫುಟ್ಪಾತ್ ಸರಿಪಡಿಸಲು ಅಧಿಕಾರಿಗಳಿಂದ ಯಾವುದೇ ಸ್ಪಂದನ ಸಿಗದಿದ್ದಾಗ, ಬೆಂಗಳೂರು ಮೂಲದ ಖಾಸಗಿ ಕಂಪೆನಿಯೊಂದರ ಸಿಇಒ ತಾವೇ ಸ್ವತಃ ಹಣ ಖರ್ಚು ಮಾಡಿ ರಿಪೇರಿ ಮಾಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋರಮಂಗಲ ಫುಟ್ಪಾತ್ ಹಾಳಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಈ ಕುರಿತು ಖಾಸಗಿ ಸಂಸ್ಥೆಯೊಂದರ ಸಂಸ್ಥಾಪಕ ಮತ್ತು ಸಿಇಒ ಸಿದ್ಧಾರ್ಥ್ ಡಿಯಾಲಾನಿ ಎಂಬವರು ಜಿಬಿಎ ಪೋರ್ಟಲ್‌ನಲ್ಲಿ ದೂರು ದಾಖಲಿಸಿ, ಅಲ್ಲದೆ, ಜಿಬಿಎಗೆ ಇಮೇಲ್ ಕಳುಹಿಸಿ, ವಾಟ್ಸ್‌ಆ್ಯಪ್ ಸಹಾಯವಾಣಿಯಲ್ಲಿ ಚಾಟ್ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಜಿಬಿಎ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬೇಸತ್ತ ಸಿದ್ಧಾರ್ಥ್. ತಾವೇ ಕೆಲಸಗಾರರನ್ನು ಕರೆಸಿ ಫುಟ್ಪಾತ್‌ನಲ್ಲಿ ಸಿಮೆಂಟ್ ರಾಂಪ್ ನಿರ್ಮಿಸಿದ್ದಾರೆ.
ಸಿದ್ದಾರ್ಥ್ ಅವರು ಈ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಕೋರಮಂಗಲ ಫುಟ್ಪಾತ್‌ನಲ್ಲಿನ ಈ ರಾಂಪ್‌ನಿಂದಾಗಿ ವೃದ್ಧರು, ಗಾಲಿಕುರ್ಚಿ(ವ್ಹೀಲ್‌ಚೇರ್) ಬಳಸುವವರು ಹಾಗೂ ಮಗುವಿನ ಸ್ಟೋಲರ್ ತಳ್ಳುವ ಪೋಷಕರಿಗೆ ಸಂಚರಿಸಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ನಾಗರಿಕ ಸಮಸ್ಯೆಗಳನ್ನು ಬಗೆಹರಿಸಲು ಸಾರ್ವಜನಿಕರು ಒಂದಾಗಬೇಕು ಎಂದು ಉದ್ಯಮಿಗಳಾದ ಕಿರಣ್ ಮಜುಂದಾರ್‌ಷಾ. ಮೋಹನ್‌ದಾಸ್ ಪೈ ಹಾಗೂ ನಿಖಿಲ್ ಕಾಮತ್ ಅವರನ್ನು ಸಿದ್ಧಾರ್ಥ್ ಟ್ಯಾಗ್ ಮಾಡಿದ್ದಾರೆ. ಇನ್ನು, ಸಿದ್ಧಾರ್ಥ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.






