ಕೆಪಿಎಸ್ಸಿ: ಗ್ರೂಪ್ ‘ಬಿ’ ವೃಂದದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು, ಮಾ.8: ಕೆಪಿಎಸ್ಸಿ 2024ನೇ ಮಾ.13ರಂದು ಅಧಿಸೂಚಿಸಲಾಗಿದ್ದ ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್‌ಆಫ್ ಅಂಕಗಳನ್ನು ಆಯೋಗದ ಜಾಲತಾಣ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಬಿಬಿಎಂಪಿ ಸಹಾಯಕ ಇಂಜಿನಿಯರ್(ಸಿವಿಲ್) ವಿಭಾಗ-1ರ 92 ಉಳಿಕೆ ಮೂಲ ವೃಂದ ಮತ್ತು 8 ಹೈ.ಕ., ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್(ಸಿವಿಲ್) ವಿಭಾಗ-1ರ 90 ಉಳಿಕೆ ಮೂಲ ವೃಂದ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ 24 ಉಳಿಕೆ ಮೂಲ ವೃಂದ ಮತ್ತು 3 ಹೈ.ಕ., ಹಿಂ.ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರು/ತಾಲೂಕು ಹಿಂ.ವರ್ಗಗಳ ಕಲ್ಯಾಣಾಧಿಕಾರಿಗಳ 21 ಉಳಿಕೆ ಮೂಲ ವೃಂದ ಮತ್ತು 19 ಹೈ.ಕ. ಸೇರಿದಂತೆ ವಿವಿಧ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್‌ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಸಂಬಂಧ ಯಾವುದಾದರೂ ಆಕ್ಷೇಪಗಳಿದ್ದಲ್ಲಿ ಈ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದ 7 ದಿನಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560 001 ಇವರಿಗೆ ಆಕ್ಷೇಪಗಳನ್ನು ಸಲ್ಲಿಸಬಹುದು. ಕೊನೆಯ ದಿನದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಯಾಗಲು ಇಚ್ಛಿಸದಿದ್ದಲ್ಲಿ ಆಯೋಗದ ಜಾಲತಾಣದಲ್ಲಿ ಲಭ್ಯವಿರುವ Not-Willingness Certificate ಅನ್ನು ಡೌನ್‌ಲೋಡ್ ಮಾಡಿಕೊಂಡು ಸ್ಟಾಂಪ್ ಪೇಪರ್‌ನಲ್ಲಿ ನೋಟರಿ ಮೂಲಕ ದೃಢೀಕರಿಸಿರುವ ಪ್ರಮಾಣಪತ್ರ ಮತ್ತು ಪೂರಕ ದಾಖಲೆಗಳೊಂದಿಗೆ ಆಯೋಗಕ್ಕೆ ಖುದ್ದಾಗಿ ಹಾಜರಾಗಿ ಇಚ್ಛಾ ಹೇಳಿಕೆಯನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.







