ಕೆಪಿಎಸ್‍ಸಿ: ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ವ್ಯಕ್ತಿತ್ವ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
310 ಆರ್ ಪಿಸಿ ಮತ್ತು 74 ಹೈದರಾಬಾದ್ ಕರ್ನಾಟಕ (ಎಚ್‍ಕೆ) ವೃಂದದ ಹುದ್ದೆಗಳು ಸೇರಿದಂತೆ ಒಟ್ಟು 384 ಹುದ್ದೆಗಳು. ಅರ್ಹ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ಮತ್ತು ಮೂಲ ದಾಖಲೆಗಳ ಪರಿಶೀಲನೆಯು ಮೇ 6 ರಿಂದ 10ರ ವರೆಗೆ ವಿವಿಧ ದಿನಾಂಕಗಳಲ್ಲಿ ನಡೆಯಲಿದೆ. ಮುಖ್ಯ ಪರೀಕ್ಷೆಯಿಂದ 1:3ರ ಅನುಪಾತದಲ್ಲಿ ಅರ್ಹತೆ ಪಡೆದ ಒಟ್ಟು 1,158 ಅಭ್ಯರ್ಥಿಗಳು ಈ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಆಯೋಗದ ಸಭೆಯ ತೀರ್ಮಾನದಂತೆ ವ್ಯಕ್ತಿತ್ವ ಪರೀಕ್ಷೆಯ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಹೆಸರು, ಪರೀಕ್ಷೆಯ ದಿನಾಂಕ ಮತ್ತು ಸಮಯದ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಆಯೋಗದ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಈಗಾಗಲೇ ಸೂಚನಾ ಪತ್ರಗಳನ್ನು ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‍ಸೈಟ್ http://kpsc.kar.nic.in ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.






