‘ಕೆಪಿಟಿಸಿಎಲ್: ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಗೆ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಬಳಕೆ’

ಬೆಂಗಳೂರು : ಹೈ-ವೋಲ್ಟೇಜ್ ಮತ್ತು ಎಕ್ಸ್ಟ್ರೀಮ್ ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಯಲ್ಲಿ ಸಿಬ್ಬಂದಿ ವರ್ಗದ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ನಿಖರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 11 ಸಾವಿರಕ್ಕೂ ಹೆಚ್ಚು ಟವರ್‍ಗಳನ್ನು ತಪಾಸಣೆ ನಡೆಸಿದೆ.
ಒಂದೂವರೆ ಲಕ್ಷಕ್ಕೂ ಹೆಚ್ಚು ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿ ಅದನ್ನು ಸರಿಪಡಿಸಿದೆ. ಈ ಮೂಲಕ ಶೇ.85ರಷ್ಟು ವಿದ್ಯುತ್ ವ್ಯತ್ಯಯವನ್ನು ಕಡಿಮೆ ಮಾಡಲಾಗಿದೆ. ಈ ಮೂಲಕ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಲ್ಲಿ ಕೆಪಿಟಿಸಿಎಲ್ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ರಾಜ್ಯಾದ್ಯಂತ ಇರುವ ಹೈ-ವೋಲ್ಟೇಜ್ ಮತ್ತು ಅತಿ-ಹೆಚ್ಚಿನ ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆ ಮತ್ತು ನಿರ್ವಹಣೆಗಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಈ ವಿಶೇಷ ಡ್ರೋನ್‍ಗಳು ಹೈ-ರೆಸಲ್ಯೂಶನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ (ಉಷ್ಣತೆ ಅಳೆಯುವ ತಂತ್ರಜ್ಞಾನ) ಮತ್ತು ಲಿಡಾರ್ ಸೆನ್ಸಾರ್‍ಗಳನ್ನು ಹೊಂದಿವೆ. ದಟ್ಟವಾದ ಅರಣ್ಯಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರ ಪ್ರದೇಶಗಳಲ್ಲಿ ಹಾದುಹೋಗಿರುವ ಪ್ರಸರಣ ಟವರ್‍ಗಳು, ವಾಹಕಗಳು ಮತ್ತು ಇನ್ಸುಲೇಟರ್‍ಗಳನ್ನು ಅತಿ ಸಮೀಪದಿಂದ ಹಾಗೂ ನಿಖರವಾಗಿ ತಪಾಸಣೆ ಮಾಡಲು ಈ ಡ್ರೋನ್‍ಗಳು ನೆರವಾಗಿವೆ.
ವಿದ್ಯುತ್ ತಂತಿಗಳು ಅಥವಾ ಉಪಕರಣಗಳಲ್ಲಿ ಸಡಿಲವಾದ ಸಂಪರ್ಕದಿಂದ ಉಂಟಾಗುವ ವಿಪರೀತ ಶಾಖ ಅಥವಾ ‘ಹಾಟ್‍ಸ್ಪಾಟ್'ಗಳನ್ನು ಥರ್ಮಲ್ ಕ್ಯಾಮೆರಾಗಳು ತಕ್ಷಣವೇ ಪತ್ತೆಹಚ್ಚುತ್ತವೆ. ಡ್ರೋನ್‍ನಿಂದ ಸಂಗ್ರಹಿಸಲಾದ ಈ ದತ್ತಾಂಶವು ಕೆಪಿಟಿಸಿಎಲ್ ನ ಇಂಜಿನಿಯರ್ ಗಳಿಗೆ ಲಭ್ಯವಾಗುತ್ತಿದೆ. ಅಲ್ಲದೇ, ಮುಂಬರುವ ಡಿಜಿಟಲ್ ಟ್ವಿನ್ ಪ್ಲಾಟ್‍ಫಾರ್ಮ್‍ನೊಂದಿಗೆ ಸಂಯೋಜನೆಗೊಳ್ಳಲಿದ್ದು, ನೂತನ ಇಂಧನ ಭವನದ ನಿಯಂತ್ರಣ ಕೊಠಡಿಯಿಂದಲೆ ಸಂಪೂರ್ಣ ಜಾಲದ ಮೇಲ್ವಿಚಾರಣೆ ನಡೆಸಲು ಅನುವು ಮಾಡಿಕೊಟ್ಟಿವೆ.
ದತ್ತಾಂಶ-ಆಧಾರಿತ ನಿರ್ಧಾರಗಳು ಮತ್ತು ಕಾರ್ಯಾಚರಣೆಯ ಯಶಸ್ಸು: ಈ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯು ಕೇವಲ ದೋಷಗಳನ್ನು ಪತ್ತೆಹಚ್ಚುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. ಡ್ರೋನ್ ತಪಾಸಣೆಯ ಕಾರ್ಯಾಚರಣೆಯು ಮೂಲಸೌಕರ್ಯ ನಿರ್ವಹಣೆಯಲ್ಲಿ ಹೊಸ ದಾಖಲೆಗಳನ್ನು ಬರೆದಿದೆ.
ಶೇ.85ರಷ್ಟು ವಿದ್ಯುತ್ ವ್ಯತ್ಯಯ ಕಡಿತ: ಡ್ರೋನ್ ತಪಾಸಣೆಯಿಂದಾಗಿ ಈ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಪ್ರಕರಣಗಳು 519 ರಿಂದ ಕೇವಲ 73ಕ್ಕೆ ಗಣನೀಯವಾಗಿ ಇಳಿಕೆಯಾಗಿವೆ. ಸವಾಲಿನ 220ಕೆವಿ ಸಾಮರ್ಥ್ಯದ 2,500ಕ್ಕೂ ಹೆಚ್ಚು ಕಿ.ಮೀ. ಹಾಗೂ 400ಕೆವಿ ಸಾಮರ್ಥ್ಯದ 843 ಕಿ.ಮೀ. ಮಾರ್ಗಗಳನ್ನು ಕರಾರುವಾಕ್ಕಾಗಿ ಪರಿಶೀಲಿಸಲಾಗಿದೆ.
ಬೃಹತ್ ಟವರ್‌ಗಳ ಪರಿಶೀಲನೆ: ಪ್ರಸರಣ ಜಾಲದ ಸಾವಿರಾರು ಟವರ್‌ಗಳು ಮತ್ತು ಸ್ಪ್ಯಾನ್‍ಗಳ ಸಂಪೂರ್ಣ ಭೌತಿಕ ಮೌಲ್ಯಮಾಪನ ಮಾಡಲಾಗಿದೆ. ಸಂಭಾವ್ಯ ಮತ್ತು ನಿರ್ಣಾಯಕ ಸಮಸ್ಯೆಗಳನ್ನು ವಿದ್ಯುತ್ ಕಡಿತಗೊಳ್ಳುವ ಮುನ್ನವೆ ಪತ್ತೆಹಚ್ಚಲಾಗಿದ್ದು, ಅಧಿಕಾರಿಗಳು ವೆಬ್ ಹಾಗೂ ಸಿಬ್ಬಂದಿಗಳು ಮೊಬೈಲ್ ಆಪ್ ಮೂಲಕ ಇದನ್ನು ನೈಜ-ಸಮಯದಲ್ಲಿ ಟ್ರ್ಯಾಕ್ ಮಾಡುತ್ತಿದ್ದಾರೆ.
ನಿಖರವಾದ ಲೊಕೇಷನ್ ಲಭ್ಯತೆಯಿಂದ ಸುಲಭವಾಗಿ ಇದನ್ನು ಸರಿಪಡಿಸಲಾಗಿದೆ. ಲೈನ್‍ಗಳ ವ್ಯಾಪ್ತಿಯಲ್ಲಿನ ದೋಷಗಳನ್ನು ಪತ್ತೆ ಹೆಚ್ಚಿರುವುದರಿಂದ ಒಮ್ಮೆಲೆ ಆಯಾ ವ್ಯಾಪ್ತಿಗಳಲ್ಲಿ ವಿಶೇಷ ದುರಸ್ತಿ ಕಾರ್ಯಾಚರಣೆಯನ್ನು ಕೈಗೊಳ್ಳುವ ಮೂಲಕ ಇದರ ದುರಸ್ತಿಯನ್ನು ಒಮ್ಮೆಲೆ ಮಾಡಲಾಗಿದೆ.
ಸ್ಮಾರ್ಟ್ ನಿರ್ವಹಣೆ: ಈ ನಿಖರ ದತ್ತಾಂಶವನ್ನು ಆಧರಿಸಿ, 200ಕ್ಕೂ ಹೆಚ್ಚು ನಿರ್ಣಾಯಕ ಸಮಸ್ಯೆಗಳನ್ನು ಕೇವಲ 5 ‘ಬ್ಯಾಚ್ ನಿರ್ವಹಣಾ ವಿಂಡೋ'ಗಳಲ್ಲಿ ಶೀಘ್ರವಾಗಿ ಪರಿಹರಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ದತ್ತಾಂಶವು ಜಿಐಎಸ್ ಮತ್ತು ಇಆರ್‌ಪಿ ವ್ಯವಸ್ಥೆಗಳೊಂದಿಗೆ ಸಂಯೋಜನೆಗೊಳ್ಳಲು ಸಂಪೂರ್ಣ ಸಜ್ಜಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯಾದ್ಯಂತ ಇರುವ 45 ಸಾವಿರ ಕಿ.ಮೀ. ಉದ್ದದ ವಿದ್ಯುತ್ ಮಾರ್ಗಗಳನ್ನು ಸಿಬ್ಬಂದಿಯೇ ಖುದ್ದಾಗಿ ಪರಿಶೀಲಿಸುವುದು ಹೆಚ್ಚು ಸಮಯ ತೆಗೆದುಕೊಳ್ಳುವ ಹಾಗೂ ಅಪಾಯಕಾರಿ ಕೆಲಸವಾಗಿದೆ. ಥರ್ಮಲ್ ಮತ್ತು ಲಿಡಾರ್ ತಂತ್ರಜ್ಞಾನ ಹೊಂದಿದ ಡ್ರೋನ್‍ಗಳನ್ನು ಬಳಸುವ ಮೂಲಕ, ನಾವು ಈಗ ಅತಿ ಕಡಿಮೆ ಸಮಯದಲ್ಲಿ ನಮ್ಮ ಬೃಹತ್ ಟವರ್‍ಗಳ 360-ಡಿಗ್ರಿ ತಪಾಸಣೆ ನಡೆಸಬಹುದು. ಬರಿಗಣ್ಣಿಗೆ ಕಾಣಿಸದ ಸಣ್ಣ ದೋಷಗಳನ್ನೂ ಗುರುತಿಸಲು ಈ ತಂತ್ರಜ್ಞಾನ ನಮ್ಮ ಇಂಜಿನಿಯರ್‍ಗಳಿಗೆ ಶಕ್ತಿ ನೀಡುತ್ತದೆ. ಕೇವಲ ತಪಾಸಣೆಯಿಂದಲೇ ಶೇ.85ರಷ್ಟು ವಿದ್ಯುತ್ ವ್ಯತ್ಯಯ ಕಡಿತಗೊಳಿಸಿರುವುದು ನಮ್ಮ ಡಿಜಿಟಲ್ ಆಧುನೀಕರಣದ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
-ಕೆ.ಜೆ.ಜಾರ್ಜ್, ಇಂಧನ ಸಚಿವ
ಸಮಸ್ಯೆ ಎದುರಾದಾಗ ದುರಸ್ತಿ ಮಾಡುವುದಕ್ಕಿಂತ, ಸಮಸ್ಯೆ ಬರುವ ಮುನ್ನವೇ ಎಚ್ಚೆತ್ತುಕೊಳ್ಳುವ ಈ ವ್ಯವಸ್ಥೆಯಿಂದಾಗಿ ನಮ್ಮ ವಿದ್ಯುತ್ ಗ್ರಿಡ್ ಮತ್ತಷ್ಟು ಸದೃಢವಾಗಿದೆ. ಹೊಸ ತಂತ್ರಜ್ಞಾನದ ಅಳವಡಿಕೆಯ ಮೂಲಕ ರಾಜ್ಯದ ರೈತರು, ಕೈಗಾರಿಕೆಗಳು ಮತ್ತು ಸಾರ್ವಜನಿಕರಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸುವುದರ ಜೊತೆಗೆ, ನಮ್ಮ ಲೈನ್‍ಮನ್‍ಗಳ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
-ಡಾ.ವಿ.ರಾಮ್ ಪ್ರಸಾತ್ ಮನೋಹರ್, ವ್ಯವಸ್ಥಾಪಕ ನಿರ್ದೇಶಕ, ಕೆಪಿಟಿಸಿಎಲ್






