ಕೇಂದ್ರ ಸರಕಾರ ರಾಜ್ಯದ ನೆರವಿಗೆ ಬರಬೇಕು : ಕೃಷ್ಣಭೈರೇಗೌಡ

ಬೆಂಗಳೂರು : ಇತ್ತೀಚಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬದಲಾವಣೆಗಳು ಮತ್ತು ಹೆಚ್ಚುತ್ತಿರುವ ಸಾಮಾಜಿಕ ಬದ್ಧತೆ, ಹವಾಮಾನ ಆಘಾತ ಮತ್ತು ವೇಗದ ನಗರೀಕರಣದಿಂದ ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಹೀಗಾಗಿ, ಮುಂದಿನ ಬಜೆಟ್‍ನಲ್ಲಿ ರಾಜ್ಯದ ನೆರವಿಗೆ ಕೇಂದ್ರ ಸರಕಾರ ಬರಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಒತ್ತಾಯಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಡೆದ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಅವರು ಈ ಮನವಿ ಸಲ್ಲಿಸಿದ್ದು, ರಾಜ್ಯದ ಆದಾಯಕ್ಕಿಂತ ವೇಗವಾಗಿ ರಾಜ್ಯದ ಹೊಣೆಗಾರಿಕೆ ವಿಸ್ತರಣೆಯಾಗಿದ್ದು, 2026-27ರ ಬಜೆಟ್‍ನಲ್ಲಿ ಇದನ್ನು ಸರಿದೂಗಿಸುವ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವುದನ್ನು ಅನಿವಾರ್ಯವಾಗಿಸಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರದ ನಡುವೆ ಸಹಕಾರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಆರ್ಥಿಕ ಸಮತೋಲನವನ್ನು ಕಾಪಾಡಲು ಕೆಲ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.
ಪ್ರಮುಖವಾಗಿ ಜಿಎಸ್ಟಿ ದರಗಳ ವೈಜ್ಞಾನೀಕರಣದ ನಂತರ ಕರ್ನಾಟಕದ ಆದಾಯ ಬೆಳವಣಿಗೆಯು ಶೇ.12ರಿಂದ ಶೇ 5ಕ್ಕೆ ಕುಸಿದಿದೆ. ಇದರಿಂದ ಈ ವರ್ಷ 5 ಸಾವಿರ ಕೋಟಿ ರೂ. ಮತ್ತು ಮುಂದೆ ವರ್ಷಕ್ಕೆ ಸುಮಾರು 9000 ಕೋಟಿ ರೂ. ನಷ್ಟವಾಗುತ್ತಿದ್ದು ಕೇಂದ್ರವು ಇದಕ್ಕೆ ಸೂಕ್ತ ಪರಿಹಾರ ನೀಡಬೇಕು. ಕೇಂದ್ರ ಸರಕಾರವು ತನಗೆ ಆಗುವ ನಷ್ಟವನ್ನು ಪಾನ್ ಮಸಾಲಾ ಮತ್ತು ತಂಬಾಕಿನ ಮೇಲೆ ಸೆಸ್ ವಿಧಿಸುವ ಮೂಲಕ ಸರಿದೂಗಿಸಿಕೊಳ್ಳಬಹುದು. ಆದರೆ, ರಾಜ್ಯ ಸರಕಾರಗಳಿಗೆ ಇಂತಹ ಅವಕಾಶಗಳಿಲ್ಲ. ಆದ್ದರಿಂದ ರಾಜ್ಯಗಳ ಆದಾಯದ ರಕ್ಷಣೆಗೆ ಬಲಿಷ್ಠ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಬಜೆಟ್‍ನಲ್ಲಿ ಘೋಷಿಸಿದಂತೆ 5300 ಕೋಟಿ ರೂ. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಜಲ ಜೀವನ್ ಯೋಜನೆಯಲ್ಲಿನ ಬಾಕಿ ಇರುವ ಕೇಂದ್ರದ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದೂ ಅವರು ಉಲ್ಲೇಖಿಸಿದ್ದಾರೆ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗೌರವ ಧನವನ್ನು ಹೆಚ್ಚಿಸಬೇಕು. ಮಾವು, ಈರುಳ್ಳಿ, ಟೊಮೆಟೊ ಸೇರಿದಂತೆ 8 ಬೆಳೆಗಳಿಗೆ ಬೆಲೆ ಕೊರತೆ ಪಾವತಿ ಯೋಜನೆ ಜಾರಿಗೆ ತರಲು 796 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನವನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕ ಆರೋಗ್ಯ, ಜಾರಿ ಮತ್ತು ನಿಯಂತ್ರಣ ಕ್ರಮಗಳ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಆದರೆ, ಸೆಸ್‍ನ ಬಹುಪಾಲು ಹಣ ರಾಜ್ಯದ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಿದೆ. ಆದ್ದರಿಂದ ತಂಬಾಕಿನ ಮೇಲಿನ ಅಬಕಾರಿ ಸುಂಕ ಮತ್ತು ಪಾನ್ ಮಾಸಲಾದ ಮೇಲಿನ ಸೆಸ್‍ನ ಶೇ.50 ಅನ್ನು ರಾಜ್ಯದೊಂದಿಗೆ ಹಂಚಿಕೆ ಮಾಡುವ ಮೂಲಕ ಹಣಕಾಸಿನ ನ್ಯಾಯಸಮ್ಮತೆ ಮತ್ತು ಸಹಕಾರಿ ಒಕ್ಕೂಟ ಕ್ರಮವನ್ನು ಮರು ಸ್ಥಾಪಿಸಬೇಕು ಎಂದು ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ.







