ಮೂರು ವರ್ಷಗಳಲ್ಲಿ ಶೇ.100 ಎಬಿಸಿ ಗುರಿ ಸಾಧಿಸಲು ಕಾರ್ಯಸೂಚಿ ಸಿದ್ಧಪಡಿಸಿ : ಕೃಷ್ಣ ಭೈರೇಗೌಡ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಶೇ.100 ಎಬಿಸಿ(ಅನಿಮಲ್ ಬರ್ತ್ ಕಂಟ್ರೋಲ್) ಕಾರ್ಯ ಪೂರ್ಣಗೊಳಿಸಲು ಸಮಗ್ರ ಕಾರ್ಯಸೂಚಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ ಮಂಗಳವಾರ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ಹಿಂದಿನ 50 ವರ್ಷಗಳಿಂದ ಪರಿಹರಿಸಲು ಹಲವು ಪ್ರಯತ್ನಗಳು ನಡೆದಿದ್ದರೂ, ಸಮಸ್ಯೆ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ನಾಗರಿಕರ ಆತಂಕ ಮತ್ತು ಅಭಿಪ್ರಾಯಗಳಿಗೆ ಸರಕಾರವೂ ಸ್ಪಂದಿಸುತ್ತಿದ್ದು, ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ನಗರದಲ್ಲಿ 2000ನೇ ಸಾಲಿನಿಂದಲೇ ಎಬಿಸಿ ಕಾರ್ಯ ಆರಂಭವಾಗಿದೆ. 2007ರಲ್ಲಿ ಬಿಬಿಎಂಪಿ ರಚನೆಯಾದ ಬಳಿಕ ಇದುವರೆಗೆ ಸುಮಾರು 8.80 ಲಕ್ಷ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2019ರ ಸಮೀಕ್ಷೆ ಪ್ರಕಾರ ನಗರದಲ್ಲಿ 3.10 ಲಕ್ಷ ಹಾಗೂ 2023ರ ಅಂದಾಜು ಪ್ರಕಾರ 2.79 ಲಕ್ಷ ಬೀದಿ ನಾಯಿಗಳಿವೆ. 2016ರಿಂದ 2023ರವರೆಗೆ 3.33 ಲಕ್ಷ ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದೆ. ಆದರೂ, ಬೀದಿ ನಾಯಿಗಳ ಸಂಖ್ಯೆಯಲ್ಲಿ ನಿರೀಕ್ಷಿತ ಇಳಿಕೆ ಕಂಡುಬಂದಿಲ್ಲ. ಇದೇ ರೀತಿಯಲ್ಲಿ ಮುಂದುವರಿದರೆ ಇನ್ನೂ ಹಲವು ವರ್ಷಗಳಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಕಟ್ಟುನಿಟ್ಟಿನ ಕಾರ್ಯತಂತ್ರ ರೂಪಿಸಿ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಸೂಚಿಸಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಹಿಂದಿನ ಐದು ವರ್ಷಗಳಲ್ಲಿ ಎಬಿಸಿ ಶಸ್ತ್ರಚಿಕಿತ್ಸೆಗಾಗಿ ಸುಮಾರು 42 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸುತ್ತಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಬೀದಿ ನಾಯಿಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಪ್ರಸ್ತುತ ವರ್ಷಕ್ಕೆ ಸುಮಾರು 45 ಸಾವಿರ ಬೀದಿ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಅಗತ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸಿ ಈ ಸಾಮಥ್ರ್ಯವನ್ನು ದ್ವಿಗುಣಗೊಳಿಸಿ ವರ್ಷಕ್ಕೆ 90 ಸಾವಿರ ನಾಯಿಗಳಿಗೆ ಎಬಿಸಿ ನಡೆಸುವ ಗುರಿ ಹೊಂದಲಾಗಿದೆ. ಈ ರೀತಿಯಾಗಿ ಮೂರು ವರ್ಷಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿ ನಗರದಲ್ಲಿ ಶೇ.100 ಎಬಿಸಿ ಸಾಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಎಬಿಸಿ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಸಂಸ್ಥೆಗಳನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾಗರಿಕರಲ್ಲಿ ಜಾಗೃತಿ ಮೂಡಿಸಿ, ಆಸಕ್ತಿ ಹೊಂದಿರುವ ಸಂಸ್ಥೆಗಳು ಹಾಗೂ ಸಂಘಟನೆಗಳನ್ನು ಈ ಕಾರ್ಯದಲ್ಲಿ ಭಾಗಿಯಾಗುವಂತೆ ಪ್ರೋ ತ್ಸಾಹಿಸಬೇಕು. ಬೆಂಗಳೂರು ನಗರದಲ್ಲಿನ ಸಂಸ್ಥೆಗಳ ಜೊತೆಗೆ ಇತರೆ ನಗರಗಳ ಸಂಸ್ಥೆಗಳಿಗೂ ಅವಕಾಶ ಕಲ್ಪಿಸಿ ಕಾರ್ಯಸಾಮಥ್ರ್ಯ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೆÇಮ್ಮಲ ಸುನೀಲ್ ಕುಮಾರ್, ಜಿ.ಜಗದೀಶ್, ರಮೇಶ್ ಕೆ.ಎನ್., ಡಾ.ರಾಜೇಂದ್ರ ಕೆ.ವಿ., ವಿಶೇಷ ಆಯುಕ್ತ ವೆಂಕಟಾ ಚಲಪತಿ, ಪಶುಪಾಲನಾ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಾನೇನು ಕಿವಿಯಲ್ಲಿ ದಾಸವಾಳ ಹೂ ಇಟ್ಟುಕೊಂಡಿದ್ದೀನಾ?: ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ ಅಗತ್ಯ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಸಭೆಗೆ ಬಂದ ಅಧಿಕಾರಿಗಳನ್ನು ಸಚಿವ ಕೃಷ್ಣಬೈರೇಗೌಡ ತರಾಟೆಗೆ ತೆಗೆದುಕೊಂಡರು. ‘ಅಗತ್ಯ ದಾಖಲೆ ತರದೇ ಬರಿಗೈಲಿ ಬಂದಿದ್ದೀರಾ? ನಾನೇನು ಕಿವಿ ಮೇಲೆ ದಾಸವಾಳ ಹೂವು ಇಟ್ಟುಕೊಂಡಿದ್ದೀನಾ? ಲಕ್ಷಾಂತರ ಬೀದಿ ನಾಯಿಗಳ ಸಂತಾನಹರಣ ಮಾಡಿದ್ದೇವೆ ಎನ್ನುತ್ತೀರಿ, ಆದರೆ, ಅವುಗಳ ಸಂಖ್ಯೆ ಮಾತ್ರ ಹಾಗೆಯೇ ಇದೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನೀವು ಜನರನ್ನು ಮೂರ್ಖರನ್ನಾಗಿಸುತ್ತಿದ್ದೀರಾ? ಯಾವುದೇ ಅಂಕಿ-ಅಂಶಗಳಿಲ್ಲದೆ ಸಭೆಗೆ ಹೇಗೆ ಬರುತ್ತೀರಿ? ಇವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಿ’ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದರು. ಪಶುಸಂಗೋಪನೆ ಇಲಾಖೆಯಲ್ಲಿ 19 ಮಂದಿ ಅಧಿಕಾರಿಗಳಿದ್ದರೂ ಸಚಿವರು ಕರೆದ ಸಭೆಗೆ ಕನಿಷ್ಠ ಅಂಕಿ-ಅಂಶಗಳನ್ನು ಇಲ್ಲದೆ ಬರಿಗೈಲಿ ಬಂದಿದ್ದರು.
ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರ ಜೊತೆಗೆ ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಂಡು ಎಬಿಸಿ ಶಸ್ತ್ರಚಿಕಿತ್ಸೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.






