ರಾಜಧಾನಿಯಲ್ಲಿ ಈವರೆಗೆ 1.22ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯ ತೆರವು : ಕೃಷ್ಣಬೈರೇಗೌಡ

ಬೆಂಗಳೂರು : ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದಡಿ ರಾಜಧಾನಿ ಬೆಂಗಳೂರಿನಾದ್ಯಂತ ಇದುವರೆಗೆ ಒಟ್ಟಾರೆ 1.22ಲಕ್ಷ ಮೆಟ್ರಿಕ್ ಟನ್ ಸಿ/ಡಿ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ನಗರಾದ್ಯಂತ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವಂತೆ ಆಸ್ತಿ ಮಾಲಕರಿಗೆ ನೀಡಲಾಗಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಪಾಲಿಕೆಯಿಂದ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಶಾಂತಿನಗರ ಕ್ಷೇತ್ರದ ದೊಮ್ಮಲೂರಿನಲ್ಲಿ ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ನಗರಾದ್ಯಂತ ಜಿಬಿಎ ವತಿಯಿಂದ 67,152 ಮೆಟ್ರಿಕ್ ಟನ್ ಸಿ/ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಬಿಡಿಎ ವತಿಯಿಂದ 51,323 ಮೆಟ್ರಿಕ್ ಟನ್, ಜಲಮಂಡಳಿಯಿಂದ 728 ಮೆಟ್ರಿಕ್ ಟನ್, ಕೆಐಎಡಿಬಿಯಿಂದ 2,800 ಮೆಟ್ರಿಕ್ ಟನ್, ಕೆ-ರೈಡ್‍ನಿಂದ 560 ಮೆಟ್ರಿಕ್ ಟನ್ ಹಾಗೂ ಎನ್‍ಹೆಚ್‍ಎಐ ವತಿಯಿಂದ 169 ಮೆಟ್ರಿಕ್ ಟನ್ ಸಿ/ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇದರೊಂದಿಗೆ, ಬೆಸ್ಕಾಂ ವತಿಯಿಂದ 6,173 ಪೋಲ್ಸ್/ರಾಡ್ಸ್ ಗಳನ್ನು ತೆರವುಗೊಳಿಸುವ/ಎತ್ತರಿಸುವ ಕಾರ್ಯ ಹಾಗೂ ಮೆಟ್ರೋ ವತಿಯಿಂದ 2,143 ಕ್ಯು.ಮೀ. ತ್ಯಾಜ್ಯ ತೆರವು ಕಾರ್ಯ ಕೈಗೊಳ್ಳಲಾಗಿದೆ. ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಇದುವರೆಗೆ ಒಟ್ಟು 1,22,732 ಮೆಟ್ರಿಕ್ ಟನ್ ಸಿ/ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲಕರಿಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಸಂಬಂಧ ನಗರ ಪಾಲಿಕೆವಾರು ಒಟ್ಟು 189 ಖಾಲಿ ನಿವೇಶನಗಳಿಗೆ ನೋಟಿಸ್ ಅಂಟಿಸಲಾಗಿದ್ದು, 5 ನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿರುವ ಖಾಲಿ ನಿವೇಶನಗಳನ್ನು ಮಾಲಕರೇ ಸ್ವತಃ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಪಾಲಿಕೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲು ವಿಧಿಸಲಾಗುವ ಹೆಚ್ಚಿನ ವೆಚ್ಚದಿಂದ ತಪ್ಪಿಸಿಕೊಳ್ಳುವಂತೆ ಸಚಿವ ಕೃಷ್ಣ ಬೈರೇಗೌಡ ನಿವೇಶನ ಮಾಲಕರಲ್ಲಿ ಮನವಿ ಮಾಡಿದರು.
ಜುಲೈ 15ರಿಂದ ನಗರಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿರುವ ಸಿ/ಡಿ ತ್ಯಾಜ್ಯ ಹಾಗೂ ಗಿಡ-ಗಂಟಿಗಳನ್ನು ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಖಾಸಗಿ ಖಾಲಿ ನಿವೇಶನಗಳ ಮಾಲಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿತ್ತು. ಬಳಿಕ ಮತ್ತೊಂದು ವಾರ, ಅಂದರೆ ಆಗಸ್ಟ್ 22ರವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಸುಮಾರು ಶೇ.30ರಷ್ಟು ನಿವೇಶನ ಮಾಲಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಂಡಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿ ಶೇ.70ರಷ್ಟು ಖಾಲಿ ನಿವೇಶನಗಳ ಮಾಲಕರು ಇದುವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಹೀಗಾಗಿ, ಇಂದಿನಿಂದ ಅಂತಹ ಖಾಲಿ ನಿವೇಶನಗಳನ್ನು ಪಾಲಿಕೆಯಿಂದಲೇ ಸ್ವಚ್ಛಗೊಳಿಸಲಾಗುವುದು. ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ಮಾಲಕರಿಂದ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಆಸ್ತಿ ಮಾಲಕರು ತಮ್ಮ ಖಾಲಿ ನಿವೇಶನಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಿಕೊಳ್ಳುವ ಬದಲು ಸ್ವತಃ ಸ್ವಚ್ಛಗೊಳಿಸಿಕೊಳ್ಳುವುದು ಸೂಕ್ತ. ಪಾಲಿಕೆಯಿಂದ ಸ್ವಚ್ಛಗೊಳಿಸುವುದಕ್ಕಿಂತ ನೀವೇ ಸ್ವತಃ ಸ್ವಚ್ಛಗೊಳಿಸಿಕೊಂಡರೆ ಕಡಿಮೆ ವೆಚ್ಚದಲ್ಲಿ ಕಾರ್ಯ ಪೂರ್ಣಗೊಳಿಸಬಹುದು. ನಿಮ್ಮ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಂಡು ಬೆಂಗಳೂರಿನ ಸುಧಾರಣೆಗೆ ಸಹಕರಿಸಿ. ಸ್ವತಃ ನಿವೇಶನವನ್ನು ಸ್ವಚ್ಛಗೊಳಿಸಿಕೊಂಡಿರುವ ಮಾಲಕರಿಗೆ ನಾನೇ ಧನ್ಯವಾದ ಪತ್ರವನ್ನು ಕಳುಹಿಸುತ್ತೇನೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಈ ವೇಳೆ ಬಿಡಿಎ ಅಧ್ಯಕ್ಷರು ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್ ಜಿ., ಅಪರ ಆಯುಕ್ತ ವೆಂಕಟಾಚಲಪತಿ, ಮುಖ್ಯ ಇಂಜಿನಿಯರ್‍ಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.






