ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮೂಡದೆ ಟ್ರಾಫಿಕ್ ಪರಿಹಾರ ಅಸಾಧ್ಯ : ಕೃಷ್ಣ ಬೈರೇಗೌಡ

ಬೆಂಗಳೂರು : ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮೂಡದೆ ಬೆಂಗಳೂರು ನಗರದ ಪ್ರಮುಖ ಸಮಸ್ಯೆಯಾದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹುಡುಕುವುದು ಅಸಾಧ್ಯ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಸೋಮವಾರ ವಿಕಾಸಸೌಧದ ಕಚೇರಿಯಲ್ಲಿ ಪಾಲಿಕೆಯ ಮಾಜಿ ಮಹಾಪೌರರುಗಳ ಜೊತೆ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ನಡೆಸಿದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಪ್ರಮುಖ ಸಮಸ್ಯೆಗಳ ಪೈಕಿ ಟ್ರಾಫಿಕ್ ಸಮಸ್ಯೆಗೆ ಅಗ್ರಸ್ಥಾನ ಇದೆ. ಈ ಸಮಸ್ಯೆಯನ್ನು ಈಗ ಬಿಗಿ ಮಾಡದಿದ್ದರೆ, ಭವಿಷ್ಯದಲ್ಲಿ ಪರಿಹಾರ ಹುಡುಕಲಾಗದಷ್ಟು ಉಲ್ಬಣಿಸಲಿದೆ ಎಂದು ಕೃಷ್ಣ ಬೈರೇಗೌಡ ಎಚ್ಚರಿಸಿದರು.
ಎಲ್ಲ ಸರಕಾರಗಳೂ ಬೆಂಗಳೂರಿನಲ್ಲಿ ನಿರಂತರವಾಗಿ ರಸ್ತೆ ನಿರ್ಮಾಣ ಕಾರ್ಯ ನಡೆಸಿವೆ. ಆದರೆ, ಹೀಗೆ ನಿರ್ಮಾಣಗೊಳ್ಳುವ ರಸ್ತೆಗಳ ಪೈಕಿ ಶೇ.60ರಷ್ಟು ರಸ್ತೆ ಪಾರ್ಕಿಂಗ್‍ಗೆ ಹೋಗುತ್ತಿದೆ. ಸಣ್ಣ ರಸ್ತೆಗಳಲ್ಲೂ ಸಹ ಸಾರ್ವಜನಿಕರು ಎರಡೂ ಕಡೆ ವಾಹನ ಪಾರ್ಕಿಂಗ್ ಮಾಡುತ್ತಾರೆ. ಪರಿಣಾಮ ವಾಹನಗಳು ನಿರಂತರ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ. ಹೀಗಾಗಿ ಯಾವುದೇ ಸರಕಾರ ಬರಲಿ ರಸ್ತೆ ನಿರ್ಮಿಸಿಯೂ ಜನರಿಂದ ಬೈಸಿಕೊಳ್ಳುವುದು ಮಾತ್ರ ತಪ್ಪುವುದಿಲ್ಲ ಎಂದು ಕೃಷ್ಣ ಬೈರೇಗೌಡ ವಿಷಾದಿಸಿದರು.
ರಸ್ತೆಗಳಲ್ಲಿ ಶಿಸ್ತುಬದ್ಧ ವಾಹನ ನಿಲುಗಡೆಯನ್ನು ಸಾಧ್ಯವಾಗಿಸಿದರೆ, ಜನರಿಗೆ ಸಂಚಾರ ದಟ್ಟಣೆಯ ಕಿರಿಕಿರಿ ಸಾಕಷ್ಟು ತಪ್ಪುತ್ತದೆ. 2 ಕಿ.ಮೀ. ದೂರದವರೆಗಿನ ಕೆಲಸಕ್ಕೆ ಜನ ಪಾದಚಾರಿ ಮಾರ್ಗದಲ್ಲಿ ಓಡಾಡುವಂತೆ ಮೈಕ್ರೋ ಮೊಬಿಲಿಟಿ ಕೆಲಸ ಮಾಡಬೇಕು. ಆದರೆ, ಅಲ್ಲಿಯೂ ಸಮಸ್ಯೆಯಿದೆ. ಪ್ರಸ್ತುತ ಪಾದಚಾರಿ ಮಾರ್ಗ ತೆರವುಗೊಳಿಸುತ್ತಿದ್ದೇವೆ. ಪಾರ್ಕಿಂಗ್ ರೆಗ್ಯುಲೇಷನ್ ಮಾಡದೆ, ಮೈಕ್ರೋ ಮೊಬಿಲಿಟಿ ಸಾಧ್ಯವಿಲ್ಲ. ಹೀಗಾಗಿ ಜನ ಸಾಮಾನ್ಯರು ಪಾರ್ಕಿಂಗ್ ವಿಚಾರದಲ್ಲಿ ಶಿಸ್ತು ಪಾಲಿಸುವಂತೆ ನೋಡಿಕೊಳ್ಳಬೇಕಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಎಲ್ಲರೂ ಸೇರಿ ಕಟ್ಟಡ ನಿರ್ಮಾಣದಲ್ಲೂ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿದ್ದೇವೆ. ಬೇರೆ ಕಡೆ ಅನುಮತಿಯಿಲ್ಲದೆ ಕಟ್ಟಡ ನಿರ್ಮಾಣ ಸಾಧ್ಯವೇ ಇಲ್ಲ. ಆದರೆ, ನಗರದಲ್ಲಿ ಯಾರೂ ನಿಯಮಗಳನ್ನು ಪಾಲಿಸುವುದೇ ಇಲ್ಲ, ಸೀವೇಜ್ ಲೈನ್ ಬದಲಿಸುವುದಿಲ್ಲ, ಮನೆಯಲ್ಲಿ ಯಾರೂ ಪಾರ್ಕಿಂಗ್‍ಗಾಗಿ ಜಾಗ ಬಿಟ್ಟುಕೊಳ್ಳುವುದಿಲ್ಲ. ಆದರೆ, ಇಂತಹ ವರ್ತನೆಯನ್ನು ಇನ್ನೂ ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ. ಹೀಗಾಗಿ ಕಾನೂನು ಬಿಗಿಗೊಳಿಸುವುದು ಅನಿವಾರ್ಯ ಎಂದು ಕೃಷ್ಣ ಬೈರೇಗೌಡ ಮನವರಿಕೆ ಮಾಡಿಕೊಟ್ಟರು.
ಇದಲ್ಲದೆ, ನಗರದ ಮತ್ತೊಂದು ಪ್ರಮುಖ ಸಮಸ್ಯೆಯಾದ ಕಸ ವಿಲೇವಾರಿಗೆ ಸಂಬಂಧಿಸಿ ಈಗಾಗಲೇ ಸಿ/ಡಿ ತ್ಯಾಜ್ಯ ತೆರವುಗೊಳಿಸುವ ಎಲ್ಲಾ ವಾಹನಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಕಡ್ಡಾಯವಾಗಿ ಜಿಪಿಎಸ್ ಇರಬೇಕು. ಕಸವನ್ನು ನಿಗದಿತ ಘಟಕದಲ್ಲೇ ಸುರಿಯಬೇಕು ಎಂಬ ವಿಚಾರವನ್ನು ಕಡ್ಡಾಯಗೊಳಿಸಿ, ಅದಕ್ಕೆಂದು 5 ಕಡೆ ಜಾಗ ಗುರುತಿಸಿ ನಿಯಮ ಪಾಲಿಸುವಂತೆ ಮಾಡಲಾಗಿದೆ ಎಂದು ಮಾಜಿ ಮಹಾಪೌರರಿಗೆ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಎಂ.ರಾಮಚಂದ್ರಪ್ಪ, ಮುಮ್ತಾಜ್ ಬೇಗಂ, ಕೆ.ಚಂದ್ರಶೇಖರ್, ಎಸ್.ಕೆ.ನಟರಾಜ್, ಡಿ.ವೆಂಕಟೇಶ್ ಮೂರ್ತಿ, ಬಿ.ಎಸ್.ಸತ್ಯನಾರಾಯಣ, ಶಾಂತಕುಮಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಮಹಾಪೌರರ ಸಲಹೆಗಳು:
• ಎಲ್ಲಾ ಕಡೆಯೂ ರುದ್ರಭೂಮಿಗಳ ಅಭಿವೃದ್ಧಿ ಆಗಬೇಕಿದೆ.
• ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚವ ಕೆಲಸವಾಗಬೇಕು.
• ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸಬೇಕು.
• 2000 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಬೃಹತ್ ನೀರುಗಾಲುವೆಗಳ ಅಭಿವೃದ್ಧಿ ಕಾರ್ಯ ತ್ವರಿತವಾಗಿ ಸಮರ್ಪಕವಾಗಿ ಆಗಬೇಕು.
• ಬಫರ್ ರಸ್ತೆ(ಸಂಚಾರಯುಕ್ತ) ರಸ್ತೆಗಳನ್ನು ನಿರ್ಮಿಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅದಕ್ಕೆ ಹೆಚ್ಚು ಆದ್ಯತೆ ನೀಡಬೇಕು.
• ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು.
• ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಬೇಕು.
• ಡಾಂಬರೀಕರಣಕ್ಕೆ ಗುತ್ತಿಗೆದಾರರ ಮೇಲೆ ಅವಲಂಬಿತರಾಗದೇ, ಪಾಲಿಕೆಗೆ ಒಂದು ಡಾಂಬರು ಘಟಕ ನಿರ್ಮಾಣ ಮಾಡಬೇಕು.
• ಮೇಲ್ಸೇತುವೆಗಳ ನಿರ್ವಹಣೆ ಸರಿಯಾಗಿ ಆಗಬೇಕು.
• ರಸ್ತೆ ಬದಿ ತ್ಯಾಜ್ಯ ಬಿಸಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಎಲ್ಲಿಯೂ ಕಸ ಬಿಸಾಡದಂತೆ ಕ್ರಮ ಕೈಗೊಳ್ಳಬೇಕು.
• ಹಳೆಯ ಮೇಲ್ಸೇತುವೆಗಳ ಬೇರಿಂಗ್ಸ್ ಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
• ಒಮ್ಮೆ ಬಳಸುವ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸುವ ಕೆಲಸವಾಗಬೇಕು.
• ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಜಲಮಂಡಳಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅದರ ಮೇಲೆ ಹೆಚ್ಚು ಗಮನ ನೀಡಿ ಸರಿಪಡಿಸುವ ಕೆಲಸ ಮಾಡಬೇಕು.
• ಅನಧಿಕೃತವಾಗಿ ರಸ್ತೆಗಳನ್ನು ಕತ್ತರಿಸುವುದನ್ನು ಇಲಾಖೆಗಳ ಸಮನ್ವಯದೊಂದಿಗೆ ನಿಯಂತ್ರಿಸುವ ಕೆಲಸ ಮಾಡಬೇಕು.
• ಕಲ್ಯಾಣ ಕಾರ್ಯಕ್ರಮಗಳಡಿ ಒಂಟಿ ಮನೆ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು.
• ಪಾರ್ಕ್‍ಗಳಲ್ಲಿರುವ ಆಟಿಕೆಗಳನ್ನು ಬದಲಿಸುವ ಕೆಲಸ ಮಾಡಬೇಕು.






