ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
‘ಗುತ್ತಿಗೆದಾರರ ಬಿಲ್ ಪಾವತಿಯಲ್ಲಿ ಪಾರದರ್ಶಕತೆ, ಸ್ವಯಂಚಾಲಿತ ಅನುಮೋದನೆ, ಕಾಗದರಹಿತ ಪಾವತಿ ಜಾರಿ’

ಬೆಂಗಳೂರು : ಗುತ್ತಿಗೆದಾರರ ಬಿಲ್‍ಗಳ ಪರಿಶೀಲನೆ ಮತ್ತು ಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ವೇಗ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿಸಲು ಹಲವು ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶನಿವಾರ ಈ ಸಂಬಂಧ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಸರಕಾರಿ ಅನುದಾನದ ಕಾಮಗಾರಿಗಳಾಗಲಿ ಅಥವಾ ನಗರ ಪಾಲಿಕೆಗಳ ಸ್ವಂತ ನಿಧಿಯ ಕಾಮಗಾರಿಗಳಾಗಲಿ, ಎಲ್ಲಕ್ಕೂ ಈ ಹೊಸ ನಿಯಮಗಳು ಏಕರೂಪವಾಗಿ ಅನ್ವಯಿಸಲಿವೆ ಎಂದಿದ್ದಾರೆ.
ಸಾರ್ವಜನಿಕ ಕಾಮಗಾರಿಗಳ ಬಿಲ್ ಸಲ್ಲಿಕೆ ಮತ್ತು ಪಾವತಿಯಲ್ಲಿ ಎದುರಾಗುತ್ತಿದ್ದ ಸುದೀರ್ಘ ವಿಳಂಬ ಹಾಗೂ ಅನಿಶ್ಚಿತತೆಗೆ ಮುಕ್ತಿ ನೀಡುವುದು ಈ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದೆ. ಈ ಹಿಂದಿನ ಹಂತ-ಹಂತದ ಕೈ ಬರಹದ ಪರಿಶೀಲನೆಗಳ ಬದಲಿಗೆ, ಪ್ರತಿಯೊಂದು ಹಂತದಲ್ಲೂ ಸ್ಪಷ್ಟ ಹೊಣೆಗಾರಿಕೆ, ಕೆಲಸಕ್ಕೆ ವೇಗ ತುಂಬುವ ಹಾಗೂ ಪಾರದರ್ಶಕವಾದ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಹೊಸ ವ್ಯವಸ್ಥೆಯು ಕೇವಲ ಪಾವತಿಯನ್ನು ವೇಗಗೊಳಿಸುವುದು ಮಾತ್ರವಲ್ಲದೆ, ಬೆಂಗಳೂರಿನ ಐದೂ ನಗರ ಪಾಲಿಕೆಗಳಲ್ಲಿ ಗುತ್ತಿಗೆದಾರರ ಪಾವತಿ ಪ್ರಕ್ರಿಯೆಯನ್ನು ನಂಬಿಕೆಗೆ ಅರ್ಹವಾಗಿಸಲಿದೆ. ಜೊತೆಗೆ ಕಾಮಗಾರಿಗಳ ಗುಣಮಟ್ಟ, ಒಪ್ಪಂದಗಳ ನಿರ್ವಹಣೆ ಮತ್ತು ಆರ್ಥಿಕ ಶಿಸ್ತನ್ನು ಬಲಪಡಿಸಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಹೊಸ ವ್ಯವಸ್ಥೆಯಡಿ, ಬಿಲ್‍ಗಳು ಸಮಗ್ರ ಆರ್ಥಿಕ ನಿರ್ವಹಣಾ ವ್ಯವಸ್ಥೆ(ಐಎಫ್‍ಎಂಎಸ್) ತಂತ್ರಾಂಶದ ಮೂಲಕ ಹಂತ-ಹಂತವಾಗಿ ಸರಳವಾಗಿ ವಿಲೇ ಆಗಲಿವೆ. ಪ್ರತಿಯೊಂದು ಬಿಲ್ ಅನ್ನು ಮೊದಲು ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ಪರಿಶೀಲಿಸುತ್ತದೆ. ನಂತರ ಸ್ಥಳೀಯ ಇಂಜಿನಿಯರ್‍ಗಳು ತಪಾಸಣೆ ನಡೆಸಿ ದೃಢೀಕರಿಸುತ್ತಾರೆ. ತದನಂತರ ಚೀಫ್ ಇಂಜಿನಿಯರ್ ಅವರಿಂದ ಪ್ರಿ-ಆಡಿಟ್ ಮತ್ತು ಅನುಮೋದನೆ ದೊರೆತ ಬಳಿಕ, ಜೇಷ್ಠತೆಯ ಆಧಾರದ ಮೇಲೆ ಪಾವತಿ ಪ್ರಕ್ರಿಯೆ ನಡೆಯುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗುತ್ತಿಗೆದಾರರ ನೋಂದಾಯಿತ ಬ್ಯಾಂಕ್ ಖಾತೆಗಳಿಗೆ ಐಎಫ್‍ಎಂಎಸ್ ತಂತ್ರಾಂಶದ ಮೂಲಕ ಒಟಿಪಿ ಆಧಾರಿತ ದೃಢೀಕರಣದೊಂದಿಗೆ ನೇರವಾಗಿ ಹಣ ಜಮಾ ಆಗಲಿದೆ. ಇದರಿಂದ ಹಳೆಯ ಮಾದರಿಯ ಮ್ಯಾನುವಲ್ ಆರ್‍ಟಿಜಿಎಸ್ ವ್ಯವಸ್ಥೆಗೆ ಪೂರ್ಣವಿರಾಮ ಬೀಳಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಪ್ರಕ್ರಿಯೆ ಹೆಚ್ಚು ಸುರಕ್ಷಿತ ಹಾಗೂ ಪಾರದರ್ಶಕವಾಗಲಿದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದ್ದಾರೆ.
ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ಪರಿಶೀಲನೆ ಮತ್ತು ಗುಣಮಟ್ಟ ತಪಾಸಣೆ ಸೇರಿದಂತೆ ಬಿಲ್ ವಿಲೇವಾರಿಯ ಪ್ರತಿಯೊಂದು ಹಂತಕ್ಕೂ ನಿರ್ದಿಷ್ಟ ಕಾಲಮಿತಿ ಇರುತ್ತದೆ. ಉದಾಹರಣೆಗೆ, ಸ್ಥಳೀಯ ಇಂಜಿನಿಯರ್‍ಗಳು ತಪಾಸಣೆ ನಡೆಸಿ ವರದಿ ನೀಡಲು 7 ದಿನಗಳ ಕಾಲಾವಕಾಶವಿರುತ್ತದೆ. ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಆ ಬಿಲ್ ‘ಸ್ವಯಂಚಾಲಿತವಾಗಿ ಅನುಮೋದನೆಗೊಂಡಿದೆ’ ಎಂದು ಪರಿಗಣಿತವಾಗಿ ಮುಂದಿನ ಹಂತಕ್ಕೆ ಸಾಗಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇದರ ಜೊತೆಗೆ, ಅಧಿಕಾರಿಗಳ ಜವಾಬ್ದಾರಿಯನ್ನೂ ಸ್ಪಷ್ಟಪಡಿಸಲಾಗಿದೆ. ಯಾವುದೇ ಅಧಿಕಾರಿಯು ನಿಗದಿತ ಸಮಯದಲ್ಲಿ ಪರಿಶೀಲಿಸದೆ ಬಿಟ್ಟು, ಮುಂದೆ ಆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ, ಅದಕ್ಕೆ ಸಂಬಂಧಿಸಿದ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಯಾವುದೇ ಬಿಲ್ ಅನ್ನು ತಡೆಹಿಡಿಯಬೇಕಾದರೆ ಅಥವಾ ತಿರಸ್ಕರಿಸಬೇಕಾದರೆ, ಅದಕ್ಕೆ ಸೂಕ್ತ ಕಾರಣವನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈ ಸೌಲಭ್ಯವು ಐಎಫ್‍ಎಂಎಸ್ ಸಾಫ್ಟ್‍ವೇರ್‍ನಲ್ಲೇ ಇರುವುದರಿಂದ ಗುತ್ತಿಗೆದಾರರಿಗೆ ತಮ್ಮ ಬಿಲ್ ಎಲ್ಲಿದೆ ಮತ್ತು ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕಾಮಗಾರಿಯ ಟೆಂಡರ್ ಹಂಚಿಕೆಯಿಂದ ಹಿಡಿದು ಅಂತಿಮ ಪಾವತಿಯವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು ಐಎಫ್‍ಎಂಎಸ್ ಸಾಫ್ಟ್‍ವೇರ್‍ಗೆ ತರಲಾಗುತ್ತಿದೆ. ಇದರಿಂದ ಪ್ರತಿಯೊಂದು ಸಾರ್ವಜನಿಕ ಕಾಮಗಾರಿಯ ಹಂತ-ಹಂತದ ಮಾಹಿತಿಯೂ ಡಿಜಿಟಲ್ ರೂಪದಲ್ಲಿ ಲಭ್ಯವಿರುತ್ತದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಪ್ರತಿಯೊಂದು ಕಾಮಗಾರಿ ನಡೆಯುವ ಸ್ಥಳದಲ್ಲಿಯೂ ಅದಕ್ಕೆ ಜವಾಬ್ದಾರರಾದ ಇಂಜಿನಿಯರ್ ಮತ್ತು ಗುತ್ತಿಗೆದಾರರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ. ಸಾರ್ವಜನಿಕರಿಗಾಗಿ ಆನ್‍ಲೈನ್ ಡ್ಯಾಶ್‍ಬೋರ್ಡ್ ಲಾಂಚ್ ಮಾಡಲಾಗುತ್ತಿದ್ದು, ಇದರ ಮೂಲಕ ನಗರದಲ್ಲಿ ನಡೆಯುತ್ತಿರುವ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಸ್ಥಿತಿಗತಿಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಬಹುದು ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಆರ್ಥಿಕ ಶಿಸ್ತನ್ನು ಕಾಪಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನಗರ ಪಾಲಿಕೆಗಳಲ್ಲಿ ಪ್ರತ್ಯೇಕ ‘ಆಂತರಿಕ ಲೆಕ್ಕಪರಿಶೋಧನಾ ವಿಭಾಗ'ವನ್ನು ಸ್ಥಾಪಿಸಲಾಗುತ್ತಿದೆ. ಇದು ಪ್ರಸ್ತುತ ಇರುವ ಮುಖ್ಯ ಲೆಕ್ಕಪರಿಶೋಧಕರ ವಾರ್ಷಿಕ ಆಡಿಟ್‍ಗೆ ಪೂರಕವಾಗಿ ನಿಯಮಿತವಾಗಿ ಆಂತರಿಕ ತಪಾಸಣೆ ನಡೆಸಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಸುಧಾರಣೆಗಳು ಬೆಂಗಳೂರಿನ ಐದೂ ನಗರ ಪಾಲಿಕೆಗಳ ಕಾಮಗಾರಿ ನಿರ್ವಹಣಾ ಶೈಲಿಯಲ್ಲಿ ದೊಡ್ಡ ಬದಲಾವಣೆ ತರಲಿವೆ. ಕಾಮಗಾರಿಯ ಪ್ರಗತಿ, ಬಿಲ್ ವಿಲೇವಾರಿ, ಗುಣಮಟ್ಟ ನಿಯಂತ್ರಣ, ಪಾವತಿ ಮತ್ತು ಆಡಿಟ್ - ಎಲ್ಲವನ್ನೂ ಒಂದೇ ಡಿಜಿಟಲ್ ಚೌಕಟ್ಟಿನಡಿ ತರುವುದರಿಂದ ವಿಳಂಬ ಕಡಿಮೆಯಾಗಿ, ಪಾರದರ್ಶಕತೆ ಹೆಚ್ಚಲಿದೆ ಎಂದು ಕೃಷ್ಣ ಬೈರೇಗೌಡ ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ






