ಡಿಸೆಂಬರ್ 4ರಿಂದ 13ರ ವರೆಗೆ ‘ಬೆಂಗಳೂರು ಜಾತ್ರೆ’ : ಕೃಷ್ಣ ಬೈರೇಗೌಡ
‘ರಾಜಧಾನಿಯ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಎತ್ತಿಹಿಡಿಯುವ ಯೋಜನೆ’

ಬೆಂಗಳೂರು : ರಾಜಧಾನಿ ಬೆಂಗಳೂರಿನ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆ ಎತ್ತಿಹಿಡಿಯುವ ನಿಟ್ಟಿನಲ್ಲಿ ಡಿಸೆಂಬರ್ 4 ರಿಂದ 13ರವರೆಗೆ 10 ದಿನಗಳ ಕಾಲ ‘ಬೆಂಗಳೂರು ಜಾತ್ರೆ’ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶನಿವಾರ ನಗರದ ಜಿಬಿಎ ಕೇಂದ್ರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದಿನನಿತ್ಯವೂ ನಗರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವ ಸರಕಾರಕ್ಕೆ ಯಾಂತ್ರಿಕ ಬದುಕಿಗೆ ಒಗ್ಗಿಕೊಂಡ ಜನ ಸಾಮಾನ್ಯರ ಬದುಕಿನ ಮತ್ತೊಂದು ಅನುಭವದ ಅನುಭೂತಿಯನ್ನು ನೀಡುವ ಹಾಗೂ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇರುತ್ತದೆ. ಆ ನಿಟ್ಟಿನಲ್ಲಿ ಬೆಂಗಳೂರು ಜಾತ್ರೆಯನ್ನು ಆಯೋಜಿಸಲಾಗುತ್ತಿದೆ ಎಂದರು.
ರಾಜ್ಯ ಸರಕಾರ ಆಗಸ್ಟ್ 15ರಂದು ಮೊಟ್ಟ ಮೊದಲ ಬಾರಿಗೆ ‘ಫ್ರೀಡಂ ಹಬ್ಬ’ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮ ಜನರಿಂದ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ನಗರದಲ್ಲಿ ಜನರನ್ನೂ ಒಳಗೊಳ್ಳುವ ಇಂತಹ ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯತೆ ಬಗ್ಗೆ ಮನಗಂಡ ಮುಖ್ಯಮಂತ್ರಿಗಳು ಡಿಸೆಂಬರ್‍ನಲ್ಲಿ ಇದೇ ರೀತಿಯ ‘ಬೆಂಗಳೂರು ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಅದರಂತೆ ಇದೀಗ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನೂ ಈ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಖಾಸಗಿ ಸಂಸ್ಥೆಗಳು, ಸಂಘ-ಸಂಸ್ಥೆಗಳು ಸರಕಾರದೊಂದಿಗೆ ಕೈಜೋಡಿಸಿ ಈ ಉತ್ಸವವನ್ನು ಯಶಸ್ವಿಗೊಳಿಸಬೇಕು. ಮುಂದಿನ ದಿನಗಳಲ್ಲಿ ಇದನ್ನು ಪ್ರತಿವರ್ಷ ಮುಂದುವರಿಸಿಕೊಂಡು ಹೋದರೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಿ, ಬೆಂಗಳೂರಿನ ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಹೊಸ ಶಕ್ತಿ ಸಿಗಲಿದೆ ಎಂದು ಕೃಷ್ಣ ಬೈರೇಗೌಡ ಕರೆ ನೀಡಿದರು.
ಬೆಂಗಳೂರು ಈಗಾಗಲೇ ತಂತ್ರಜ್ಞಾನ ಹಾಗೂ ಆರ್ಥಿಕ ರಂಗದಲ್ಲಿ ದೇಶಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮಾದರಿ ಕೇಂದ್ರವಾಗಿದೆ. ಅದೇ ರೀತಿ ಸಂಸ್ಕೃತಿ, ಸಾಹಿತ್ಯ ಹಾಗೂ ಜೀವನ ಶೈಲಿಯಲ್ಲೂ ಬೆಂಗಳೂರು ಅತ್ಯುತ್ತಮ ನಗರವಾಗಬೇಕೆಂಬುದು ಸರಕಾರದ ಆಶಯವಾಗಿದೆ. ಜನರಿಗೆ ಕಲೆಯನ್ನು ಆಸ್ವಾದಿಸುವ ಸೌಲಭ್ಯ ಒದಗಿಸುವುದು ಮತ್ತು ಆ ಮೂಲಕ ನಮ್ಮ ಜನಪದ ಸಾಂಸ್ಕೃತಿಕ ಕಲೆಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಇದು ಕೇವಲ ಸರಕಾರದ ಅಧಿಕೃತ ಕಾರ್ಯಕ್ರಮ ಮಾತ್ರವಲ್ಲದೆ ಸಂಪೂರ್ಣವಾಗಿ ನಾಗರಿಕರ ಹಬ್ಬವಾಗಲಿದೆ. ನಗರದಲ್ಲಿರುವ ಪ್ರಮುಖ ಐಟಿ-ಬಿಟಿ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಲಾ ಗ್ಯಾಲರಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಹೋಟೆಲ್ ಅಸೋಸಿಯೇಷನ್‍ಗಳಿಗೆ ಪತ್ರ ಬರೆಯಲಾಗುತ್ತಿದ್ದು, ಅವರವರ ಕೇಂದ್ರಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಲು ಮತ್ತು ಪ್ರತಿಯೊಂದು ಸಂಸ್ಥೆಯೂ ತನ್ನ ಶಕ್ತಿಗೆ ತಕ್ಕಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಮನವಿ ಮಾಡಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಈ ಕಾರ್ಯಕ್ರಮದಲ್ಲಿ ಹೋಟೆಲ್ ಅಸೋಸಿಯೇಷನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ವೈವಿಧ್ಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗುವುದು. ಜೊತೆಗೆ ಬೆಂಗಳೂರಿನಲ್ಲಿ ಈಗಲೂ ಕೆಲವು ಹಳೆಯ ಊರುಗಳು ತಮ್ಮ ಪರಂಪರೆ ಸಂಸ್ಕೃತಿ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಆ ಹಳೆಯ ಊರುಗಳ (ಪೇಟೆ/ಪರಂಪರೆ ಪ್ರದೇಶಗಳು) ಪ್ರಮುಖರೊಂದಿಗೆ ಮಾತನಾಡಿ, ಸ್ಥಳೀಯ ‘ಊರ ಹಬ್ಬ'ಗಳನ್ನು ಆಯೋಜಿಸಲು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಹಯೋಗದಲ್ಲಿ ರಸ್ತೆ, ಉದ್ಯಾನ, ಆಟದ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಸಾಂಸ್ಕøತಿಕ ಕಾರ್ಯಕ್ರಮ, ಸಂಗೀತ, ಕಲಾ ಪ್ರದರ್ಶನ, ಮಕ್ಕಳ ಚಟುವಟಿಕೆ ಮತ್ತು ಬೀದಿ ಉತ್ಸವಗಳನ್ನು ನಡೆಸುವ ಯೋಜನೆ ಇದೆ. ಮೆಟ್ರೋ ನಿಲ್ದಾಣಗಳಲ್ಲಿ ಕಲಾ-ಸಾಂಸ್ಕೃತಿಕ ಕಾರ್ಯಕ್ರಮ, ಆಫ್-ಪೀಕ್ ಅವಧಿಯಲ್ಲಿ ಸಂಗೀತ ಪ್ರದರ್ಶನದಂತಹ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು
ನಮ್ಮ ನಾಡಿನ ಕಲೆಯನ್ನು ಪ್ರಸರಿಸುವ ಜೊತೆಗೆ, ಭಾರತದ ವಿವಿಧ ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳನ್ನು ಬೆಂಗಳೂರಿಗೆ ಆಹ್ವಾನಿಸಲು ವಿವಿಧ ರಾಜ್ಯ ಸರಕಾರಗಳಿಗೆ ಮನವಿ ಕಳುಹಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
10 ದಿನಗಳ ಕಾಲ ಒಟ್ಟು 300ಕ್ಕೂ ಹೆಚ್ಚು ಕಲೆ, ಸಾಹಿತ್ಯ, ಸಂಗೀತ, ನಾಟಕ, ಪರಿಸರ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವ ಗುರಿ ಹೊಂದಲಾಗಿದೆ. ಇದರಲ್ಲಿ ಚಿತ್ರರಂಗದ ಪ್ರಮುಖರನ್ನೂ ಒಳಗೊಳ್ಳಲು ಯತ್ನಿಸಲಾಗುವುದು. ಚಿತ್ರರಂಗದ ಪ್ರಮುಖರು ತಾವೇ ಮುಂದಾಗಿ ಕಾರ್ಯಕ್ರಮಕ್ಕೆ ಅಗತ್ಯವಾದ ಸಹಕಾರವನ್ನು ನೀಡಬೇಕು. ಸರಕಾರದಿಂದ ಆಯೋಜಿಸುವ ಯಾವುದೇ ಕಾರ್ಯಕ್ರಮಕ್ಕೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ.ಜಾಫರ್, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ವೆಬ್‍ಸೈಟ್, ನೋಂದಣಿ ವ್ಯವಸ್ಥೆ: ‘ಯಾವ ಸ್ಥಳದಲ್ಲಿ, ಯಾವ ಸಮಯಕ್ಕೆ ಯಾವ ಕಾರ್ಯಕ್ರಮ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತ್ಯೇಕ ವೆಬ್‍ಸೈಟ್ ಮೂಲಕ ಮುಂಚಿತವಾಗಿಯೇ ಪ್ರಕಟಿಸಲಾಗುವುದು. ಸಣ್ಣ ಕಾರ್ಯಕ್ರಮಗಳಿಗೆ ನೇರ ಪ್ರವೇಶವಿದ್ದು, ಕೇವಲ ಬೃಹತ್ ಮಟ್ಟದ ಕಾರ್ಯಕ್ರಮಗಳಿಗೆ ಮಾತ್ರ ವೆಬ್‍ಸೈಟ್‍ನಲ್ಲಿ ಮುಂಗಡ ನೋಂದಣಿ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂಗಳೂರು ಜಾತ್ರೆಗೆ 20 ಕೋಟಿ ರೂ.ವ್ಯಯ ನಿರೀಕ್ಷೆ: ಈ ಯೋಜನೆಯ ಅನುಷ್ಠಾನಕ್ಕೆ ಅಂದಾಜು 15 ರಿಂದ 20 ಕೋಟಿ ರೂ. ವ್ಯಯವಾಗುವ ನಿರೀಕ್ಷೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯವ್ಯಯದಲ್ಲಿ ಮೀಸಲಿಡಲಾದ 5 ಕೋಟಿ ರೂ.ಗಳ ಜೊತೆಗೆ, 5 ನಗರ ಪಾಲಿಕೆಗಳು ತಲಾ 1 ಕೋಟಿ ರೂ. ನೀಡಲಿವೆ. ಉಳಿದ ಅನುದಾನವನ್ನು ಮೆಟ್ರೋ, ಬೆಸ್ಕಾಂ, ಜಲಮಂಡಳಿ ಹಾಗೂ ಬಿಡಿಎ ಸಂಸ್ಥೆಗಳು ಹಂಚಿಕೊಳ್ಳಲಿವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಜಿಬಿಎ ನೋಡಲ್ ಸಂಸ್ಥೆ-ಇಲಾಖೆಗಳ ಸಮಗ್ರ ಒಕ್ಕೂಟ: ಈ ಕಾರ್ಯಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮುಖ್ಯ ನೋಡಲ್ ಸಂಸ್ಥೆಯಾಗಿ ಕಾರ್ಯಾಚರಣೆ ನಡೆಸಲಿದೆ. ಇದರ ಜೊತೆಗೆ ಬಿಎಂಆರ್‍ಸಿಎಲ್ (ಮೆಟ್ರೋ), ರಾಜ್ಯ ಪೊಲೀಸ್(ಸಂಚಾರ ಹಾಗೂ ಭದ್ರತೆ), ಬಿಡಬ್ಲ್ಯೂಎಸ್‍ಎಸ್‍ಬಿ (ಜಲಮಂಡಳಿ), ಬಿಡಿಎ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಒಂದಾಗಿ ಕೈಜೋಡಿಸಿ ಕಾರ್ಯಕ್ರಮವನ್ನು ಸಂಘಟಿಸಲಿವೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.






