ಕೆಎಸ್‌ಸಿಎ ಅಂತರ್-ವಲಯ ಟೂರ್ನಮೆಂಟ್ | ಕಂಬೈನ್ಡ್ ಸಿಟಿ ಇಲೆವೆನ್‌ಗೆ ಭರ್ಜರಿ ಜಯ

ಬೆಂಗಳೂರು, ಸೆ.14 : ಅಂಡರ್-19 ವಯಸ್ಸಿನವರಿಗಾಗಿ ನಡೆದ ಕೆಎಸ್‌ಸಿಎ ಅಂತರ್-ವಲಯ ಟೂರ್ನಮೆಂಟ್‌ನಲ್ಲಿ ಶನಿವಾರ ಕಂಬೈನ್ಡ್ ಸಿಟಿ ಇಲೆವೆನ್ ತಂಡವು ರಾಯಚೂರು ವಲಯದ ವಿರುದ್ಧ ಇನಿಂಗ್ಸ್ ಹಾಗೂ 211 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.
ಈಸಾ ಪುತ್ತಿಗೆ 2ನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಸಹಿತ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್(159 ರನ್, 185 ಎಸೆತ)ಶತಕ ಸಿಡಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಚೂರು ತಂಡವು ಕಂಬೈನ್ಡ್ ಸಿಟಿ ತಂಡದ ಈಸಾ ಪುತ್ತಿಗೆ(10-3-16-3) ಬೌಲಿಂಗ್ ದಾಳಿಗೆ ನಲುಗಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 134 ರನ್‌ಗೆ ಆಲೌಟಾಯಿತು.
ನಾಯಕ ಅನ್ವಯ್ ದ್ರಾವಿಡ್(159 ರನ್, 185 ಎಸೆತ) ಹಾಗೂ ಆರಂಭಿಕ ಬ್ಯಾಟರ್ ಅಥರ್ವ ಮಾಳವೀಯ(115 ರನ್, 163 ಎಸೆತ) ಶತಕದ ಬಲದಿಂದ ಕಂಬೈನ್ಡ್ ಸಿಟಿ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 436 ರನ್ ಗಳಿಸಿತು.
2ನೇ ಇನಿಂಗ್ಸ್ ಆರಂಭಿಸಿದ ರಾಯಚೂರು ತಂಡವು ಈಸಾ ಪುತ್ತಿಗೆ(10-6-12-6)ಅವರ ಅಮೋಘ ದಾಳಿಗೆ ತತ್ತರಿಸಿ ಕೇವಲ 91 ರನ್‌ಗೆ ಆಲೌಟಾಯಿತು. ಈಸಾ ಅವರ ಸಾಹಸದಿಂದ ಕಂಬೈನ್ಡ್ ಇಲೆವೆನ್ ತಂಡವು ಇನಿಂಗ್ಸ್ ಅಂತರದಿಂದ ಭರ್ಜರಿ ಜಯ ಸಾಧಿಸಿತು.





