ಕೆಸೆಟ್: ಡಿ.22ರಿಂದ ಡಿ.24ರವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ದಾಖಲೆ ಪರಿಶೀಲನೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ(ಕೆಸೆಟ್) ಅರ್ಹರಾದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ತಾವು ಕ್ಲೇಮ್ ಮಾಡಿರುವ ಒಳಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರಗಳ ಪರಿಶೀಲನೆಗೆ ಡಿ.22ರಿಂದ ಡಿ24ರವರೆಗೆ ಕೆಇಎ ಕಚೇರಿಯಲ್ಲಿ ಹಾಜರಾಗಬೇಕು.
ಇದು ಕೇವಲ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸಲಿದ್ದು, ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳೂ ತಪ್ಪದೇ ಹಾಜರಾಗಬೇಕು. ಒಂದು ವೇಳೆ ಪರಿಶೀಲನೆಗೆ ಬಾರದೇ ಇದ್ದರೆ ಅಂತಹವರನ್ನು ಅನರ್ಹರೆಂದು ಪರಿಗಣಿಸಿ, ತಾತ್ಕಾಲಿಕ ಅರ್ಹತಾ ಪಟ್ಟಿಯಿಂದ ಕೈಬಿಡಲಾಗುವುದು.
ಅಭ್ಯರ್ಥಿಗಳು, ಕ್ಲೇಮ್ ಪ್ರಕಾರ ಆರ್‍ಡಿ ಸಂಖ್ಯೆಯ ಹೊಸ ಪ್ರಮಾಣ ಪತ್ರದ ಜತೆಗೆ ಬರಬೇಕು. ಪರಿಶೀಲಿಸಿದ ನಂತರ ಮೀಸಲಾತಿ ದಾಖಲೆ ಸರಿ ಇದ್ದವರಿಗೆ ಅವರ ಸ್ನಾತಕೋತ್ತರ ಪದವಿ ಮುಗಿದ ನಂತರ ನಿಗದಿತ ದಿನಾಂಕಗಳಂದು ಕೆಸೆಟ್ ಪ್ರಮಾಣ ಪತ್ರ ನೀಡಲಾಗುತ್ತದೆ.
ಸದ್ಯ ವಾಸಂಗ ಮಾಡುತ್ತಿರುವ ಸಾಮಾನ್ಯ ಸೇರಿದಂತೆ ಇತರ ಪ್ರವರ್ಗಗಳ ಅಭ್ಯರ್ಥಿಗಳು ಈ ದಿನಾಂಕಗಳಂದು ಬರುವ ಅಗತ್ಯ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







