ದೇಶಕ್ಕೆ ಮಾದರಿಯಾದ ‘ಮನರೇಗಾ’ ಕಾರ್ಯಕ್ರಮ ಮರುಸ್ಥಾಪಿಸಲು ಕೆ.ಶಿವಕುಮಾರ್ ಆಗ್ರಹ

ಕೆ.ಶಿವಕುಮಾರ್
ಬೆಂಗಳೂರು: ಮನರೇಗಾ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಹೆಸರನ್ನು ಮರುಸ್ಥಾಪಿಸಬೇಕು. ಹೊಸದಾಗಿ ಜಾರಿಗೊಳಿಸಿರುವ ಕಾಯ್ದೆಯನ್ನು ರದ್ದುಗೊಳಿಸಿ ಈ ಮೊದಲು ಇದ್ದಂತಹ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಒತ್ತಾಯಿಸಿದರು.
ವಿಧಾನಪರಿಷತ್ತಿನಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ವಿರೋಧಿ, ಮಹಿಳಾ ವಿರೋಧಿ, ಜನ ವಿರೋಧಿ, ದಲಿತರ ವಿರೋಧಿ ಕಾಯಿದೆಯನ್ನು ಸಂಪರ್ಣವಾಗಿ ತಿರಸ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಕೆಲಸ ಸಿಗಬೇಕು. ಗ್ರಾಮ ಪಂಚಾಯಿತಿಗಳಿಗೆ ಈ ಮೊದಲು ನೀಡುತ್ತಿದ್ದಂತಹ ಅನುದಾನ ಹಂಚಿಕೆ ಮಾಡಬೇಕು. ಒಂದು ವೇಳೆ ಜಾರಿ ಮಾಡದಿದ್ದರೆ ಮಹಾತ್ಮಗಾಂಧೀಜಿ ಕಂಡಂತಹ ಸರ್ವೋದಯ, ಅಂತ್ಯೋದಯ ದೇಶ ಕಾಣಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಮನರೇಗಾ ಯೋಜನೆಯಡಿ ರಾಜ್ಯದಲ್ಲಿ 44.92 ಕೋಟಿ ಜನರಿಗೆ ಉದ್ಯೋಗ ನೀಡಿದ್ದು, 44.92 ಕೋಟಿ ರೂ. ಹಣ ದುರುಪಯೋಗವಾಗಿತ್ತು. ಆದರೆ ದುರುಪಯೋಗ ಪಡಿಸಿಕೊಂಡವರಿಂದ ಶೇಕಡ 97 ರಷ್ಟು ಹಣವನ್ನು ಹಿಂಪಡೆಯಲಾಗಿದೆ. ದುರುಪಯೋಗ ಪಡಿಸಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಹಣ ಹಿಂಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಹಣ ದುರುಪಯೋಗವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತದಲ್ಲಿ ಉದ್ಯೋಗ ಖಾತ್ರಿ ಯೋಜನೆಯಂತಹ ಇಡೀ ದೇಶಕ್ಕೆ ಮಾದರಿಯಾದ ಯೋಜನೆಯು ಕೇಂದ್ರ ಸರ್ಕಾರಕ್ಕೆ ಹೆದರಿಕೆಯಾಗಿ ಪರಿಣಮಿಸಿದೆ. ಮನರೇಗಾ ಕಾರ್ಯಕ್ರಮ ಮನೆ ಮನೆಗೆ ಜಾಹೀರಾತಾಗಿ ಕಾಂಗ್ರೆಸ್ ಕಾರ್ಯಕ್ರಮವಾಗಿ ಬಿಂಬಿಸಿದೆ ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಶೇ.65 ರಷ್ಟು ಗ್ರಾಮೀಣ ಭಾಗದಲ್ಲಿ ಮನರೇಗಾ ಕಾರ್ಯಕ್ರಮವನ್ನು ಅವಲಿಂಬಿಸಿದ್ದಾರೆ. ಕರ್ನಾಟಕದಲ್ಲಿ 1.26 ಕೋಟಿ ಜನ ಅವಲಂಬಿಸಿದ್ದು, ಶೇಕಡ 58 ರಷ್ಟು ಉದ್ಯೋಗ ಮಾಡುತ್ತಿದ್ದಾರೆ. ಶೇಕಡ 40 ರಷ್ಟು ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅವಲಂಬಿಸಿದ್ದಾರೆ. ಇಂತಹ ಪರಿಣಾಮಕಾರಿಯಾದ ಯೋಜನೆಯು 20 ವರ್ಷಗಳಿಂದ ಯಶಸ್ವಿಯಾಗಿ ನಡೆದ ಕಾರ್ಯಕ್ರಮವನ್ನು ಬದಲಾಯಿಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.
ಉತ್ತರಪ್ರದೇಶ, ಬಿಹಾರ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಹಳ ಕಡಿಮೆ ಸಾಲ ಮಾಡಿದೆ. ಆದರೆ ಕರ್ನಾಟಕ ಹೆಚ್ಚು ಸಾಲ ಮಾಡಿದೆ ಎಂದು ಆರೋಪಿಸುತ್ತಿದೀರಾ. ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದರು.
ಯುಪಿಎ ಸರ್ಕಾರದಲ್ಲಿ ನ್ಯಾಷನಲ್ ರೂರಲ್ ಹೆಲ್ತ್ ಮಿಷನ್, ಜವಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನಿವಲ್ ಮಿಷನ್, ರಾಜೀವ್ ಆವಾಸ್ ಯೋಜನಾ, ಇಂದಿರಾ ಆವಾಸ್ ಯೋಜನಾ, ನ್ಯಾಷನಲ್ ಸೋಷಿಯಲ್ ಅಸಿಸ್ಟೆಂಟ್ ಪ್ರೋಗ್ರಾಂ ಫಾರೆಸ್ಟ್ ರೈಟ್ ಆಕ್ಟ್, ಮೆಂಬರ್ ಆಫ್ ಪಾರ್ಲಿಮೆಂಟ್ ಲೋಕಲ್ ಏರಿಯಾ ಡವಲೆಪ್ ಮೆಂಟ್ ಸ್ಕೀಂ ಇಷ್ಟೊಂದು ಕಾರ್ಯಕ್ರಮಗಳನ್ನು ಜಾರಿಗೆ ತಂದು ದೇಶ ಅಭಿವೃದ್ಧಿ ಪಥದತ್ತ ಹೋಗಬೇಕಿತ್ತು ಇನ್ನಷ್ಟು ಚಾಲನೆ ಕೊಡುವ ಕೆಲಸ ಮಾಡಬೇಕಿತ್ತು ಆದರೆ ಜಾರಿಗೊಳಿಸಿರುವ ಜನಪರ ಕಾರ್ಯಕ್ರಮವನ್ನು ಬದಲಾಯಿಸಲು ಹೊರಟಿರುವುದು ಸಮಂಜಸವಲ್ಲ ಎಂದರು.
“ನೀವು ಹೆಸರು ಬದಲಿಸಬಹುದು, ಜಾರಿ ಮಾಡಿದವರ ಬದ್ಧತೆಯನ್ನಲ್ಲ, ಕಾರ್ಮಿಕರ ಉದ್ಯೋಗ ಕಸಿದುಕೊಳ್ಳಬಹುದು ದುಡಿದು ತಿನ್ನುವ ಸ್ವಾಭಿಮಾನವನ್ನಲ್ಲ, ಜನರ ಹಕ್ಕು ಕರುಣೆಯಿಲ್ಲದೇ ಕಿತ್ತುಕೊಳ್ಳಬಹುದು. ಅವರ ನಿಷ್ಠೆ, ಸ್ವಾವಲಂಬನೆ ಬದುಕನ್ನಲ್ಲ, ಅಭಿವೃದ್ಧಿಯಿಂದ ಗ್ರಾಮ ಭಾರತ ವಂಚಿಸಬಹುದು ಹಳ್ಳಿಗಳಿಂದಲೇ ದೇಶದೆಡೆಗೆ ಎಂಬ ಗಾಂಧೀಜಿಯವರ ಮಂತ್ರವನ್ನಲ್ಲ” ಎಂದು ಬಹಳ ಸೊಗಸಾಗಿ ಕವಿತೆ ಮೂಲಕ ಯೋಜನೆಯ ಮಹತ್ವವನ್ನು ಸಾರಿದರು.
ಮನರೇಗಾ ಕಾರ್ಯಕ್ರಮ ಬೌಗೋಳಿಕವಾಗಿ ಪರಿಣಾಮ ಬೀರಿದೆ. ಮನರೇಗಾದಿಂದ ಭ್ರಷ್ಟಾಚಾರವಾಗುತ್ತಿದೆ. ಮನರೇಗಾ ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದಾಗಿತ್ತು ಆದ್ದರಿಂದ ಪ್ರಧಾನಿಯವರು ಮನರೇಗಾ ಹೆಸರನ್ನು ಬದಲಾಯಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ದೇಶದ ಅನೇಕ ಕಾರ್ಯಕ್ರಮಗಳನ್ನು ಬೇರೆ ದೇಶದಲ್ಲಿ ಅಳವಡಿಸಿಕೊಂಡಿದ್ದಾರೆ. ಸಾಕ್ಷರತೆ, ಆರೋಗ್ಯ ಕಾರ್ಯಕ್ರಮಗಳು, ವಾಜಪೇಯಿ ತಂದಂತಹ ಸುವರ್ಣ ಚತುಷ್ಪಥ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಮನರೇಗಾ ಕಾರ್ಯಕ್ರಮವನ್ನು ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಅಳವಡಿಸಿಕೊಂಡು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅದೇ ರೀತಿ ಲ್ಯಾಟಿನ್ ಅಮೇರಿಕಾ ನರೇಗಾ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಮೂಲಕ ಬಡತನ ಮತ್ತು ನಿರುದ್ಯೋಗವನ್ನು ನಿವಾರಣೆ ಮಾಡಿದ್ದಾರೆ. ಇದರ ಮನ್ನಣೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಅವರಿಗೆ ಸಲ್ಲಬೇಕು ಎಂದರು.
ಕೇಂಬ್ರಿಡ್ಜ್ ಯೂನಿವರ್ಸಿಟಿ ವಿಮರ್ಶೆ ಮಾಡಿದ್ದು, ಲ್ಯಾಟಿನ್ ಅಮೇರಿಕಾದ ಮನ್ರೇಗಾ ಕಾರ್ಯಗಳ ಬಗ್ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಈ ದೇಶದಲ್ಲಿ ಬದಲಾವಣೆ ಮಾಡಬೇಕು ಎಂದು ದೆಹಲಿಯಲ್ಲಿನ ಔರಂಗಜೇಬ್ ರಸ್ತೆಯಿಂದ ಪ್ರಾರಂಭಿಸಿ ನೀತಿ ಆಯೋಗ, ಮಹಾತ್ಮಗಾಂಧಿ ಹೆಸರನ್ನು ಬದಲಿಸುವವರೆಗೆ ಎನ್ ಡಿಎ ಮುಂದಾಗಿದೆ ಎಂದರು.
ಗಾಂಧೀಜಿಯವರು ಡರ್ಬನ್ಗೆ ಹೋಗಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ವಿದೇಶಕ್ಕೆ ಹೋಗಿದ್ದರು. ಅವರು ಏನಾದರೂ ಈಗಿನ ಭಾರತೀಯರ ರೀತಿ ಗ್ರೀನ್ ಕಾರ್ಡ್ ಪಡೆದು ಅಲ್ಲೇ ಉಳಿದಿದ್ದರೆ ನಾವಿನ್ನು ಗುಲಾಮರಾಗೇ ಬದುಕಬೇಕಾಗಿತ್ತು. ಅವರು ವಾಪಸ್ಸು ಬಂದು ಸ್ವಾತಂತ್ರ್ಯ ತಂದುಕೊಟ್ಟರು, ಅವರ ಹೆಸರು ಬದಲಾಯಿಸುವ ಮೂಲಕ ಅವರಿಗೆ ಕೊಟ್ಟಂತಹ ಬಳುವಳಿನಾ ಇದು ಎಂದು ಪ್ರಶ್ನಿಸಿದರು.
ಗಾಂಧೀಜಿಯವರು ಈ ದೇಶ ಒಗ್ಗಟ್ಟಿನಿಂದ ಪ್ರಗತಿಪರವಾಗಿರಬೇಕೆಂದು ಹಿಂದೂ ಧರ್ಮ ಸುಧಾರಣೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸರ್ವೋದಯ ಪರಿಕಲ್ಪನೆಯನ್ನು ತಂದರು. ಅಂತಹ ಮಹನೀಯರ ಹೆಸರನ್ನು ಬದಲಾಯಿಸಿರುವ ಪ್ರಧಾನಿಯವರು ಈ ದೇಶದ ಕ್ಷಮೆಯಾಚಿಸಬೇಕು. ಗಾಂಧಿಜಿಯವರ ಹೆಸರು ಬದಲಾಯಿಸುವ ಬದಲು ತಮ್ಮ ಹೆಸರನ್ನು ಅಫಿಡವೇಟ್ ನಲ್ಲಿ ಬದಲಾಯಿಸಿಕೊಳ್ಳಿ ಎಂದು ಪ್ರಧಾನಿಯವರಿಗೆ ತಿರುಗೇಟು ನೀಡಿದರು.
ನನಗೆ ಅತ್ಯಂತ ಬಾಂಧವ್ಯದಿಂದ ನೋಡುವ ಇಬ್ಬರು ವ್ಯಕ್ತಿಗಳೆಂದರೆ ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು, ಅವರಿಲ್ಲದಿದ್ದರೆ ಈ ದೇಶದಲ್ಲಿ ಬದುಕಲಿಕ್ಕೆ ಆಗುತ್ತಿರಲಿಲ್ಲ. ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ ಎಂದರು.
ಮನರೇಗಾ ಯೋಜನೆಯನ್ನು ಸೋನಿಯಾ ಗಾಂಧಿಯವರು ಯುಪಿಎ ಅಧ್ಯಕ್ಷರಾಗಿದ್ದಾಗ, ಅರ್ಥಶಾಸ್ತ್ರಜ್ಞರಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಂದೇ ರಾತ್ರಿಗೆ ಬಂದ ಜಾರಿಗೆ ತಂದ ಕಾರ್ಯಕ್ರಮವಲ್ಲ. ನರೇಗಾ ಕಾರ್ಯಕ್ರಮವನ್ನು ಮೊದಲ ಬಾರಿಗೆ 6 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಅದನ್ನು 200 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಯಿತು ಎಂದರು.
ಈ ಯೋಜನೆಯ ಪರಿಣಾಮಕಾರಿ ಜಾರಿಯಿಂದ ಕೋಟ್ಯಾಂತರ ಜನರಿಗೆ ಉದ್ಯೋಗ ಕೊಟ್ಟಂತಹ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕಾಭಿವೃದ್ಧಿ, ಉದ್ಯೋಗ ಸೃಷ್ಟಿಯಾದಂತಹ ಕಾರ್ಯಕ್ರಮವನ್ನು ಕೇವಲ 72 ಗಂಟೆಗಳಲ್ಲಿ ತೆಗೆದುಹಾಕಿರುವುದು ಶೋಚನೀಯ ಸಂಗತಿ. ಯಾವ ರಾಜ್ಯ ಸರ್ಕಾರಗಳ ಅನುಮತಿ ಪಡೆದು ಮನರೇಗಾ ಕಾರ್ಯಕ್ರಮವನ್ನು ಬದಲಾಯಿಸಿದ್ದಾರೆ. ಕೋಟ್ಯಾಂತರ ಜನರಿಗೆ ಆಸರೆಯಾಗಿದ್ದ ನರೇಗಾ ಯೋಜನೆಯಿಂದ ಸಾಕಷ್ಟು ಜನರಿಗೆ ತೋಂದರೆಯಾಗಿದೆ. ಇಂತಹ ಜನೋಪಯೋಗಿ ಕಾರ್ಯಕ್ರಮದ ಮೇಲೆ ಸರ್ವಾಧಿಕಾರಿ ಧೋರಣೆ ಸಲ್ಲದು. ಮರು ಸ್ಥಾಪಿಸಬೇಕು ಎಂದು ಅವರು ಸದನದಲ್ಲಿ ಒತ್ತಾಯಿಸಿದರು.







